Tomato Price: ಟೊಮೆಟೊ ಬೆಲೆಯಲ್ಲಿ ಮತ್ತೆ ಏರಿಕೆ, ಈಗ ಎಷ್ಟಿದೆ?
ಟೊಮೆಟೊ ಬೆಲೆಯ ಏರಿಳಿತ ಮುಂದುವರಿದಿದ್ದು, ಕೆಲವು ವಾರದಿಂದ ಆಕಾಶದಲ್ಲಿ ಇದ್ದ ಟೊಮೆಟೊ ಈಗ ಬಡವನ ಕೈಗೆ ಸಿಗ್ತಿದೆ. ಹೀಗಿದ್ದಾಗ ಕಳೆದ ಕೆಲ ದಿನದಿಂದ ಟೊಮೆಟೊ ಬೆಲೆ ಕುಸಿಯಲು ಆರಂಭಿಸಿತ್ತು. ಅದರಲ್ಲೂ ರೈತರಿಗೆ ಮತ್ತೆ ನಷ್ಟ ಎದುರಾಗುವ ಭಯವು ಕೂಡ ಎದುರಾಗಿತ್ತು. ಇಂದು ಮತ್ತೆ ಟೊಮೆಟೊ ಬೆಲೆ ಚೇತರಿಕೆ ಕಂಡಿದ್ದು, ಬೆಲೆ ಏರಿಕೆ ಆಗುತ್ತಿದೆ. ಹಾಗಾದರೆ ಇಂದಿನ ಟೊಮೆಟೊ ದರ ಎಷ್ಟು? ಬನ್ನಿ ತಿಳಿಯೋಣ.
ಈ ವಾರ ಪೂರ್ತಿ ಟೊಮೆಟೊ ಬೆಲೆ ಕುಸಿಯುವ ಭಯ ಶುರುವಾಗಿತ್ತು. ದಿನದಿಂದ ದಿನಕ್ಕೆ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿತ್ತು. ನಿನ್ನೆಯ ಬೆಲೆ ಭಾರಿ ಆತಂಕವನ್ನು ಮೂಡಿಸಿತ್ತು. ಹೀಗಾಗಿ ಟೊಮೆಟೊ ಬೆಳೆದ ರೈತರಿಗೆ ಏನು ಮಾಡಬೇಕು ಅನ್ನೋ ಚಿಂತೆ ಶುರುವಾಗಿತ್ತು. ಇದೀಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಇಂದು ಮತ್ತೆ ಟೊಮೆಟೊದ ಬೆಲೆ ಚೇತರಿಕೆ ಕಂಡಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಟೊಮೆಟೊಗೆ ಸಿಕ್ಕ ಅತಿಹೆಚ್ಚು ದರ ಎಷ್ಟು ಗೊತ್ತಾ? ಮುಂದೆ ಓದಿ.

ಟೊಮೆಟೊ ಬೆಲೆಯಲ್ಲಿ ಮತ್ತೆ ಏರಿಕೆ!
ಹೌದು ಕೆಂಪು ಚಿನ್ನವಾದ ಟೊಮೆಟೊ ಬೆಲೆ ಪಾತಾಳ ಸೇರುವ ಮುನ್ಸೂಚನೆ ಶುರುವಾಗಿತ್ತು. ಅದರಲ್ಲೂ ಈ ವಾರ ಪೂರ್ತಿ ಟೊಮೆಟೊ ಕುಸಿತದ ಬಗ್ಗೆಯೇ ಸುದ್ದಿ ಹರಿದಾಡಿತ್ತು. 14 ಕೆಜಿ ತೂಕದ ಬಾಕ್ಸ್‌ಗೆ ಕಳೆದ ಕೆಲ ವಾರದಿಂದ 2500 ರೂಪಾಯಿ ಬೆಲೆ ಇತ್ತು. ಆದರೆ ದಿಢೀರ್ ಬೆಲೆ ಕುಸಿತ ಕಾಣುತ್ತಿದ್ದು, ರೈತರು ಕಂಗಾಲಾಗಿದ್ದರು. ಸೋಮವಾರ ಕುಸಿತದ ಹಾದಿ ಹಿಡಿದ ಟೊಮೆಟೊ ಬೆಳೆ, ಮೊದಲಿಗೆ ₹1700 ರೂಪಾಯಿಗೆ ಕುಸಿದಿತ್ತು. ಮರುದಿನ ಬೆಲೆ ₹1550ಕ್ಕೆ ಕುಸಿತ ಕಂಡಿತ್ತು. 1200 ರೂಪಾಯಿಗೆ ಬಿದ್ದ ಬೆಲೆ ನಿನ್ನೆ 800 ರೂಪಾಯಿಗೆ ಬಂದು ನಿಂತಿತ್ತು. ಆದರೆ ಇಂದು ಎಲ್ಲಾ ನಿರೀಕ್ಷೆ ಮೀರಿ ಮತ್ತೆ ಏರಿಕೆ ಕಂಡಿರುವ ಟೊಮೆಟೊ ಸಂಚಲನ ಸೃಷ್ಟಿಸಿದೆ. 14 ಕೆಜಿ ತೂಕದ ಟೊಮೆಟೊ ಬಾಕ್ಸ್ ಗರಿಷ್ಠ 950 ರೂಪಾಯಿ ಬೆಲೆ ತಲುಪಿದೆ.
ಟೊಮೆಟೊ ಬಳಿಕ ಈರಳ್ಳಿ ಭಯ?
ಆಕಾಶ ಮುಟ್ಟಿ, ಆಪಲ್ ಬೆಲೆಯನ್ನೂ ಮೀರಿಸಿದ್ದ ಟೊಮೆಟೊ ಈಗ ಮತ್ತೆ ಭೂಮಿಯ ಮಟ್ಟಕ್ಕೆ ಬಂದಿದೆ. ಆದರೆ ಮುಂದೆ ಈರುಳ್ಳಿ ಬೆಲೆಯಲ್ಲೂ ಇದೇ ರೀತಿ ಏರಿಕೆ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಅಗತ್ಯ ಕ್ರಮ ಕೈಗೊಂಡು ಈರುಳ್ಳಿ ಬೆಲೆಏರಿಕೆ ನಿಯಂತ್ರಿಸಲು ಮುಂದಾಗಿದೆ. ಹೀಗಿದ್ದಾಗಲೇ ಮತ್ತೆ ಟೊಮೆಟೊ ಬೆಲೆ ಹೆಚ್ಚಾಗುತ್ತಿರುವುದು ರೈತರಿಗೆ ಒಂದಷ್ಟು ಖುಷಿ ತಂದಿದೆ. ಆದರೆ ಕಳೆದ 2ರಿಂದ 3 ವಾರದ ಹಿಂದೆ ಇದ್ದ ಬೆಲೆ ಈಗ ಇಲ್ಲವೆಂಬ ಬೇಸರ ಕೂಡ ಟೊಮೆಟೊ ಬೆಳೆಗಾರರನ್ನ ಕಾಡುತ್ತಿದೆ.

ಒಟ್ನಲ್ಲಿ ಹೀಗೆ ಬೆಲೆ ಏರಿಳಿತದ ಪರಿಣಾಮ ರೈತರಿಗೂ ಲಾಭವಿಲ್ಲ, ಗ್ರಾಹಕರಿಗೂ ಲಾಭ ಇಲ್ಲ ಎಂಬ ಆರೋಪ ಇದೆ. ಹೀಗಾಗಿ ಸರ್ಕಾರ ಇಂತಹ ದಿಢೀರ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯವಿದೆ. ಈ ಬೆಡಿಕೆ ಹಲವು ದಶಕಗಳಿಂದಲೂ ಇದ್ದು, ಪ್ರಜೆಗಳ ಮನವಿಗೆ ಆಡಳಿತ ವರ್ಗ ಈಗಲಾದರೂ ಸ್ಪಂದಿಸಬೇಕು ಅಂತಿದ್ದಾರೆ ಜನ.












Click it and Unblock the Notifications