Tomato Price: ಟೊಮೆಟೊ ಬೆಲೆ ಏರಿಕೆಯಿಂದ ವೆಜ್ ಥಾಲಿ ದರದಲ್ಲಿ ಶೇ 28 ರಷ್ಟು ಹೆಚ್ಚಳ- ಶಾಕಾಹಾರಿಗಳಿಗೆ ಸಂಕಷ್ಟ
ನವದೆಹಲಿ, ಆಗಸ್ಟ್ 08: ಟೊಮೆಟೊ ಹಾಗೂ ಈರುಳ್ಳಿ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿರುವುದರಿಂದ ಶಾಕಾಹಾರಿ ಊಟದ ದರಗಳಲ್ಲಿ ಹೆಚ್ಚಳವಾಗಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ಬೆಲೆಯು ಜುಲೈನಲ್ಲಿ ಕ್ರಮವಾಗಿ ಶೇ 28 ಮತ್ತು ಶೇ 11 ರಷ್ಟು ಏರಿಕೆಯಾಗಿದೆ.
ಸಸ್ಯಾಹಾರಿ ( ವೆಜ್ ) ಥಾಲಿಯ ಬೆಲೆಯಲ್ಲಿ ಶೇ 28 ರಷ್ಟು ಏರಿಕೆಯಾಗಿದೆ. ಇದರ ಶೇ 22ರಷ್ಟು ಏರಿಕೆಗೆ ಟೊಮೆಟೊ ಬೆಲೆಗಳು ಕಾರಣವಾಗಿದೆ. ಜೂನ್‌ನಲ್ಲಿ ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊ, ಜುಲೈನಲ್ಲಿ ಕೆಜಿಗೆ 200 ರೂಪಾಯಿಗೂ ಅಧಿಕವಾಗಿದೆ.

ಈರುಳ್ಳಿ ಮತ್ತು ಆಲೂಗೆಡ್ಡೆಗಳ ಬೆಲೆಗಳು ಕ್ರಮವಾಗಿ ಶೇ 16 ಮತ್ತು ಶೇ 9 ರಷ್ಟು ಏರಿಕೆಯಾಗಿದೆ. ಇವುಗಳ ಬೆಲೆಯು ಹೆಚ್ಚಳವಾಗುವ ಸಾಧ್ಯತೆ ಇದೆ.
ಏರುತ್ತಿರುವ ಟೊಮೆಟೊ ಬೆಲೆಗಳು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿವೆ. ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಆಹಾರ ಬೆಲೆಗಳು ಕಡಿಮೆಯಾಗದಿರುವುದು ಜನರ ಸಂಕಷ್ಟಕ್ಕೆ ಕಾರಣವಾಗಿದೆ.
ಹವಾಮಾನ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ ಆಹಾರ ಹಣದುಬ್ಬರವು ಏರಿಕೆಯಾಗುತ್ತಲೇ ಇದೆ.

ಹಣಕಾಸು ಸೇವೆಗಳ ಸಂಸ್ಥೆಯಾದ ಎಂಕೆ ಗ್ಲೋಬಲ್‌ನ ವರದಿಯ ಪ್ರಕಾರ, ಧಾನ್ಯಗಳು ( ಶೇ 3.5 ), ಬೇಳೆಕಾಳುಗಳು ( ಶೇ 7.7 ) ಮತ್ತು ತರಕಾರಿಗಳು ( ಶೇ 95.1 ) ಮತ್ತು ಹಾಲು ( ಶೇ 10.4 ) ರಷ್ಟು ಹೆಚ್ಚಳವಾಗಿದೆ. ವಾರ್ಷಿಕ ಆಧಾರದ ಮೇಲೆ ತೈಲಗಳ ಸರಾಸರಿ ಬೆಲೆಗಳು ಹೆಚ್ಚಿವೆ.
'ಟೊಮೆಟೊ ಬೆಲೆಯಲ್ಲಿನ ಏರಿಕೆಯು ಆಗಸ್ಟ್‌ನಲ್ಲಿ ಕಡಿಮೆಯಾಗಬಹುದು. ಆದರೆ ಇತರ ತರಕಾರಿ ಬೆಲೆಗಳು ಕಳೆದ ಎರಡು ವಾರಗಳಲ್ಲಿ ಏರಿಕೆಯಾಗಿದೆ' ಎಂದು ಎಂಕೆ ಗ್ಲೋಬಲ್‌ನ ಅರ್ಥಶಾಸ್ತ್ರಜ್ಞ ಮಾಧವಿ ಅರೋರಾ ಹೇಳಿದ್ದಾರೆ.
ಕ್ರಿಸಿಲ್ ವರದಿಯ ಪ್ರಕಾರ, ಮಾಂಸಾಹಾರಿ ಥಾಲಿಯ ಬೆಲೆಯು ನಿಧಾನಗತಿಯಲ್ಲಿ ಏರಿಕೆ ಕಂಡಿದೆ. ಏಕೆಂದರೆ ಬ್ರಾಯ್ಲರ್‌ಗಳ ಬೆಲೆಯು ಶೇ 50 ಕ್ಕಿಂತ ಹೆಚ್ಚು ವೆಚ್ಚವನ್ನು ಒಳಗೊಂಡಿರುತ್ತದೆ. ಇದು ಜುಲೈನಲ್ಲಿ ತಿಂಗಳಿಗೆ ಶೇ 3ರಿಂದ 5 ರಷ್ಟು ಕಡಿಮೆಯಾಗಿದೆ.

ಮೆಣಸಿನಕಾಯಿ ಮತ್ತು ಜೀರಿಗೆ ಕೂಡ ಹೆಚ್ಚು ದುಬಾರಿಯಾಗಿದೆ. ಜುಲೈನಲ್ಲಿ ಅವುಗಳ ಬೆಲೆಗಳು ಕ್ರಮವಾಗಿ ಶೇ 69 ಮತ್ತು 16 ರಷ್ಟು ಏರಿಕೆಯಾಗಿದೆ. ಆದರೆ, ಥಾಲಿಯಲ್ಲಿ ಈ ಪದಾರ್ಥಗಳನ್ನು ಕಡಿಮೆ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದು ಹೆಚ್ಚು ಭಾದಿಸುವುದಿಲ್ಲವೆಂದು ಕೃಷಿ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಸಸ್ಯಾಹಾರಿ ಥಾಲಿಯು ರೊಟ್ಟಿ, ತರಕಾರಿಗಳು ( ಈರುಳ್ಳಿ, ಟೊಮೆಟೊ ಮತ್ತು ಆಲೂಗಡ್ಡೆ ), ಅಕ್ಕಿ, ದಾಲ್, ಮೊಸರು ಮತ್ತು ಸಲಾಡ್ ಅನ್ನು ಒಳಗೊಂಡಿರುತ್ತದೆ ಎಂದು ಸಂಸ್ಥೆ ಹೇಳಿದೆ. ಮಾಂಸಾಹಾರಿ ಥಾಲಿಗೆ ದಾಲ್ ಬದಲಿಗೆ ಚಿಕನ್ ಸೇರಿಸಲಾಗುತ್ತದೆ.

ಕುಸಿಯುತ್ತಿರುವ ಟೊಮೆಟೊ ದರದಿಂದ ಗ್ರಾಹಕರಿಗೆ ನಿರಾಳ
ಟೊಮೆಟೊ ಬೆಲೆಯಿಂದ ತತ್ತರಿಸುತ್ತಿರುವ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ವಾರದ ಆರಂಭದಲ್ಲಿ ಮಾರುಕಟ್ಟೆಗಳಲ್ಲಿ ಟೊಮೆಟೊ ದರಗಳು ಕುಸಿಯುತ್ತಿರುವುದು ಕಂಡುಬಂದಿದೆ.
ಇತ್ತೀಚಿನ ವಾರಗಳಲ್ಲಿ ಪ್ರತಿ ಕಿಲೋಗೆ 250 ರಿಂದ 300 ರೂ. ವರೆಗೆ ತಲುಪಿದ ಟೊಮೆಟೊಗಳ ಬೆಲೆಗಳು ಸೋಮವಾರದ ಗಮನಾರ್ಹ ಕುಸಿತವನ್ನು ಕಾಣುತ್ತಿವೆ. ಪ್ರತಿ ಕಿಲೋಗೆ 50 ರಿಂದ 100 ರೂ ಆಗಿದೆ.
ಮುಂದಿನ ದಿನಗಳಲ್ಲಿ ಕೆಜಿಗೆ 35 ರಿಂದ 40 ರೂ. ಗೆ ಇಳಿಕೆಯಾಗಲಿದೆ ಎಂದು ಕೃಷಿ ಮಾರುಕಟ್ಟೆ ಅಧಿಕಾರಿಗಳು ಭವಿಷ್ಯ ನುಡಿದಿದ್ದಾರೆ. ಇದು ಗ್ರಾಹಕರಲ್ಲಿ ನಿರಾಳತೆಯನ್ನು ಉಂಟು ಮಾಡಲಿದೆ ಎಂದು ವರದಿಯಾಗಿದೆ.












Click it and Unblock the Notifications