ಹುಲಿ ಉಗುರಿನ ಪೆಂಡೆಂಟ್; ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 25; ಕರ್ನಾಟಕದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ವಿವಿಧ ಗಣ್ಯರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅರಣ್ಯ ಸಚಿವರನ್ನು ಪ್ರಶ್ನೆ ಮಾಡಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ, ನಟ, ಜೆಡಿಎಸ್ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ವಿವಾಹದ ಸಂದರ್ಭದಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಧರಿಸಿದ್ದರು ಎಂಬ ಸುದ್ದಿ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಬುಧವಾರ ಈ ಕುರಿತು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ. 'ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ' ಎಂದು ಹೇಳಿದ್ದಾರೆ.
'ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ' ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೋರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ.
— Nikhil Kumar (@Nikhil_Kumar_k) October 25, 2023
2/2
2020ರ ಏಪ್ರಿಲ್‌ನಲ್ಲಿ ನಟ ನಿಖಿಲ್ ಕುಮಾರಸ್ವಾಮಿ ವಿವಾಹವು ರೇವತಿ ಅವರೊಂದಿಗೆ ಸರಳವಾಗಿ ನಡೆದಿತ್ತು. ಕೋವಿಡ್ ಸಮಯವಾದ ಕಾರಣ ಹೆಚ್ಚು ಜನರನ್ನು ಸಹ ವಿವಾಹಕ್ಕೆ ಆಹ್ವಾನಿಸಿರಲಿಲ್ಲ. ನಿಖಿಲ್ ವಿವಾಹದ ಸಂದರ್ಭದಲ್ಲಿ ಧರಿಸಿದ್ದ ಹುಲಿ ಉಗುರು ಪೆಂಡೆಂಟ್ ಸರದ ಚಿತ್ರಗಳು ಈಗ ವೈರಲ್ ಆಗಿವೆ. ನಿಖಿಲ್ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಲಾಗುತ್ತಿದೆ.
ಬಿಗ್ ಬಾಸ್ ಸ್ಪರ್ಧಿ ಬಂಧನ; ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ರಾಜ್ಯದಲ್ಲಿ ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಇತರ ಗಣ್ಯರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂಬ ಚರ್ಚೆಗಳು ಆರಂಭವಾಗಿವೆ. ಕಾನೂನು ಎಲ್ಲರಿಗೂ ಸಹ ಒಂದೇ ಅಲ್ಲವೇ ಎಂದು ಪ್ರಶ್ನಿಸಲಾಗುತ್ತಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಸಹ ಹುಲಿ ಉಗುರು ಪೆಂಡೆಂಟ್ ಕುರಿತು ಪ್ರತಿಕ್ರಿಯೆ ನೀಡಿದ್ದರು. "ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಾನೂನು ಅಡಿಯಲ್ಲಿ ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.
"ಸಂತೋಷ್ ಆಭರಣದಲ್ಲಿ ಹುಲಿಯ ಉಗುರುಗಳನ್ನು ಹಾಕಿಕೊಂಡಿದ್ದಾರೆ ಎಂದು ದೂರು ಬಂದಿತ್ತು. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಕಾನೂನಿನ ಕ್ರಮ ಜರುಗಿಸಿದ್ದಾರೆ" ಎಂದು ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದ್ದರು.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನಟರಾದ ದರ್ಶನ್, ಜಗ್ಗೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮುಂತಾದವರು ಹುಲಿ ಉಗುರು ಪೆಂಡೆಂಟ್ ಹಾಕಿಕೊಂಡ ಫೋಟೋಗಳು ಹರಿದಾಡುತ್ತಿವೆ.
ಈ ಬಗ್ಗೆ ಡಿಸಿಎಫ್ಓ ರವೀಂದ್ರ ಪ್ರತಿಕ್ರಿಯೆ ನೀಡಿದ್ದು, "ಸದ್ಯಕ್ಕೆ ನಮಗೆ ಯಾವ ದೂರು ಬಂದಿಲ್ಲ. ಬೇರೆಯವರು ಹಾಕಿದ್ದರೂ ಕಾನೂನು ಅಡಿಯಲ್ಲಿ ಅಪರಾಧ ಆಗುತ್ತದೆ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.












Click it and Unblock the Notifications