ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಸ್ಟೋಟಕ ಭವಿಷ್ಯ
ಚಿಕ್ಕಮಗಳೂರು, ಫೆಬ್ರವರಿ 24: ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಬಹುದು. ಲೋಕ ಚುನಾವಣೆ ಬಳಿಕ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು, ರಾಜ್ಯದಲ್ಲಿ ಅಷ್ಟೊಂದು ಗೊಂದಲದ ವಾತಾವರಣವಿದೆ, ಅದನ್ನು ಊಹೆ ಕೂಡ ಮಾಡಲಾಗದು ಎಂದು ರಾಜ್ಯ ಸರ್ಕಾರದ ಕುರಿತು ಶೋಭಾ ಕರಂದ್ಲಾಜೆ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರಲ್ಲಿ ಸಾಕಷ್ಟು ಗೊಂದಲದ ವಾತಾವರಣವಿದೆ. ಆ ಗೊಂದಲ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಯಾವಾಗ ಬೇಕಾದರೂ ಏನು ಬೇಕಾದರೂ ಆಗುವಂತಹ ವಾತಾವರಣವಿದೆ. ಅಂತ ವಾತಾವರಣ ನಮ್ಮಲ್ಲಿಲ್ಲ, ಕಾಂಗ್ರೆಸ್ ನಲ್ಲಿ ಅಂತ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಇನ್ನೂ ಗೋ ಬ್ಯಾಕ್ ಶೋಭಾ ಅಭಿಯಾನಕ್ಕೆ ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ನಿಜವಾದ ಬಿಜೆಪಿ ಕಾರ್ಯಕರ್ತ ಈ ರೀತಿಯ ಕೆಲಸ ಮಾಡುವುದಿಲ್ಲ, ಯಾರು ಅಧಿಕಾರಕ್ಕಾಗಿಯೇ ಬರುತ್ತಾರೆ ಅಂತವರು ಈ ಕೆಲಸ ಮಾಡುತ್ತಾರೆ, ಯಾರೋ ಸ್ಪಾನ್ಸರ್ ಮಾಡಿ ಈ ರೀತಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ರು. ಮೊದಲು ಈ ವಿಚಾರ ಸ್ಪಷ್ಟವಾಗಬೇಕು, ನಮ್ಮ ಪಕ್ಷ ಇರಲಿ ವಿರೋಧ ಪಕ್ಷವೇ ಇರಲಿ, ಅಭಿವೃದ್ಧಿಯ ವಿಚಾರದಲ್ಲಿ ಚುನಾವಣೆ ನಡೆಯಬೇಕು, ಈ ಲೋಕಸಭಾ ಚುನಾವಣೆಯಲ್ಲಿ ಈ ವಿಚಾರ ಚರ್ಚೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಟಿಕೆಟ್ ಕೇಳಲು ಸಾಮಾನ್ಯ ಕಾರ್ಯಕರ್ತನಿಗೂ ಅಧಿಕಾರ ಇದೆ, ಟಿಕೆಟ್ ಕೇಳಬೇಕು ಆಗಲೇ ಪ್ರಜಾಪ್ರಭುತ್ವ ಅನಿಸಿಕೊಳ್ಳುವುದು. ನಾವು ಸರ್ವಾಧಿಕಾರದ ಅಡಿಯಲ್ಲಿ ಇಲ್ಲ, ಅಪಮಾನ ಅನವಶ್ಯಕ ಅಪಪ್ರಚಾರ ಮಾಡುವುದು ಸರಿಯಲ್ಲ. ಯಾರೋ ವಿರೋಧ, ಪರ ಮಾತನಾಡಿದರು, ಅಭಿಯಾನ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕಳೆದ ಚುನಾವಣೆಯಲ್ಲಿ ಇಂತಹ ಅಭಿಯಾನ ಮಾಡಿದ್ರು . ನಾನು ಬಹಳ ಸ್ಪಷ್ಟವಾಗಿದ್ದೇನೆ ಅಭಿವೃದ್ಧಿ ವಿಚಾರವಾಗಿ ಚುನಾವಣೆ ಎದುರಿಸುತ್ತೇನೆ, ನಾನು ಅಭಿವೃದ್ಧಿ ಮೂಲಕವೇ ಉತ್ತರವನ್ನ ನೀಡುತ್ತೇನೆ. ಜನರು ಮತ್ತು ಹೈ ಕಮಾಂಡ್ ಇದಕ್ಕೆ ಉತ್ತರ ನೀಡುತ್ತಾರೆ. ಕೆಲವು ದಿನದಲ್ಲಿ ಯಾರು ಉತ್ತರ ಕೊಡುತ್ತಾರೆ ಅವರೆ ಕೊಡುತ್ತಾರೆ ಎಂದು ತಿರುಗೇಟು ನೀಡಿದರು.
ಹೈಕಮಾಂಡ್ ಮುಂದೆ ಎಲ್ಲವೂ ಚರ್ಚೆ ಆಗುತ್ತೆ. ಯಾರು ಅಧಿಕಾರಕ್ಕಾಗಿ ಪಕ್ಷಕ್ಕೆ ಬರುತ್ತಾರೆ ಅವರು ಇಂತಹ ಕೆಲಸ ಮಾಡುತ್ತಾರೆ. ಹಿಂದೆ ಇದ್ದ ಪಾರ್ಟಿಯಲ್ಲಿ ಇದೇ ಕೆಲಸ ಮಾಡಿಕೊಂಡು ಬಂದವರು, ಇಂತಹ ಅಭಿಯಾನಕ್ಕೆ ಯಾರೋ ಸ್ಪಾನ್ಸರ್ ಮಾಡಿದ್ದಾರೆ. ನನ್ನ ವಿರೋಧ ಮಾಡುವರಿಗೂ ಆಹ್ವಾನ ನೀಡುತ್ತೇನೆ. ಅಭಿವೃದ್ಧಿ ಹೆಸರಲ್ಲಿ ಚರ್ಚೆ ಆಗ್ಬೇಕು ಮುಕ್ತ ಅವಕಾಶ ಇದೆ ಬನ್ನಿ ಚರ್ಚೆಗೆ, ಇಂತಹ ವಿರೋಧಗಳಿದ್ದಾಗ ಗಟ್ಟಿಯಾಗುತ್ತೇವೆ. ಮೋದಿಯವರಿಗೆ ಒಳ್ಳೆಯ ಹೆಸರು ಬರಬೇಕು ಎಂದು ಕೆಲಸ ಮಾಡಿದ್ದೇನೆ. ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾವಣೆ ಮಾಡುತ್ತದೆ ಎಂದು ಹೇಳಿದರು.












Click it and Unblock the Notifications