ಜನಾಕ್ರೋಶ ಯಾತ್ರೆ ನಡೆಸುತ್ತಿರುವ ಬಿಜೆಪಿಗೆ ಭಾರೀ ಮುಜುಗರ ತಂದ ಕೇಂದ್ರ ಸರ್ಕಾರದ ಆದೇಶ
ಬೆಂಗಳೂರು, ಏಪ್ರಿಲ್ 08: ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಬಿಜೆಪಿ ಘಟಕ ನಾಲ್ಕು ಹಂತಗಳ ಜನಾಕ್ರೋಶ ಯಾತ್ರೆಯನ್ನು ನಿನ್ನೆ (ಏಪ್ರಿಲ್ 07) ಮೈಸೂರಿನಲ್ಲಿ ಆರಂಭಿಸಿದೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿಯ ಹಲವು ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಆದರೆ, ಬಿಜೆಪಿಯ ಈ ಯಾತ್ರೆಗೆ ಕೇಂದ್ರದ ಆದೇಶ ತೀವ್ರ ಮುಜುಗರವನ್ನು ತಂದೊಡ್ಡಿದೆ. ಸಾರ್ವಜನಿಕ ವಲಯದಲ್ಲಿ ಬಿಜೆಪಿಯ ಈ ಪ್ರತಿಭಟನೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಬೆಲೆ ಏರಿಕೆಯ ವಿರುದ್ದ ರಾಜ್ಯ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ದೆಹಲಿಯಿಂದ ಮಹತ್ವದ ಆದೇಶ ಹೊರಬಿದ್ದದೆ. ಪಕ್ಷದ ಜನಾಕ್ರೋಶ ಯಾತ್ರೆಯ ಉದ್ದೇಶವನ್ನೇ ಪ್ರಶ್ನಿಸುವಂತಿದೆ.

ಬಿಜೆಪಿಯು ಪ್ರತಿಭಟನೆ ನಡೆಸಿದರೂ, ಯಾತ್ರೆಯ ಪ್ರಮುಖ ಅಂಶ ಬೆಲೆ ಏರಿಕೆ. ಆದರೆ, ಯಾತ್ರೆಯ ಆರಂಭದ ದಿನವೇ ಬಿಜೆಪಿಗೆ ಮುಜುಗರ ಎದುರಾಗಲು ಕಾರಣ, ಕೇಂದ್ರ ಸರ್ಕಾರದ ಸಿಲಿಂಡರ್ ಬೆಲೆ ಏರಿಕೆ. ಕೇಂದ್ರ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಲೀಟರ್ ಒಂದಕ್ಕೆ ಎರಡು ರೂಪಾಯಿ ಸುಂಕವನ್ನು ಹೆಚ್ಚಿಸಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗೆ ಏರಿಸಿದೆ. ಈ ಏರಿಕೆಯೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ, ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ಮುಜುಗರವನ್ನು ತಂದೊಡ್ಡಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನರ ಮುಂದೆ ಬಿಚ್ಚಿಟ್ಟು ಒಪ್ಪಿಕೊಂಡಿದ್ದಾರೆ.
ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಎರಡು ರೂಪಾಯಿಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂಪಾಯಿಯಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂಬುದನ್ನು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು.
ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೊಟೇಲ್ ತಿಂಡಿ ವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧೀ ನೀತಿ ಎನ್ನುವುದು ಆರ್ಥಿಕ ವ್ಯವಹಾರದ ಸಾಮಾನ್ಯ ಜ್ಞಾನ ಇದ್ದವರಿಗೆಲ್ಲ ಗೊತ್ತು. ಹೀಗಿದ್ದರೂ ಬೆಲೆ ಏರಿಕೆಯ ಪಾಪದ ಹೊರೆಯನ್ನು ನಮ್ಮ ತಲೆ ಮೇಲೆ ಕಟ್ಟಲು ಹೊರಟಿರುವ ಬಿಜೆಪಿ ನಾಯಕರ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮಸಿ ಬಳಿದಿದ್ದಾರೆ.
ಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಎರಡು ಆಯ್ಕೆ: ಒಂದೋ ಅವರು ಪ್ರಧಾನ ಮಂತ್ರಿಯವರ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಬೇಕು, ಇಲ್ಲವೇ ಯಾತ್ರೆಯನ್ನು ಕೊನೆಗೊಳಿಸಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಮನೆಗೆ ಮರಳಬೇಕು. ಇದರ ಹೊರತಾಗಿ ಈ ಯಾತ್ರೆಯ ಪ್ರಹಸನವನ್ನು ಮುಂದುವರಿಸಿದರೆ ಜನರ ಆಕ್ರೋಶಕ್ಕೆ ತುತ್ತಾಗುವುದು ಖಂಡಿತ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.












Click it and Unblock the Notifications