ಇದು ನಮ್ಮ ಆರನೇ ಗ್ಯಾರಂಟಿ: ಡಿ ಕೆ ಶಿವಕುಮಾರ್ ಮಹತ್ವ ಘೋಷಣೆ
ಬೆಂಗಳೂರು, ಡಿಸೆಂಬರ್ 01: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಅರಣ್ಯ ಪ್ರದೇಶದಲ್ಲೂ ವಾಸಿಸುವವರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡಿದೆ. ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳನ್ನು ಇ ಖಾತಾ ಅಭಿಯಾನ ಮಾಡಿದ್ದು, 6 ಲಕ್ಷ ಜನರಿಗೆ ಇ ಖಾತಾ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡರು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ 1,11,111 ಜನರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮ ಮಾಡಿ ಹಕ್ಕುಪತ್ರ, ಭೂ ದಾಖಲೆಗಳನ್ನು ವಿತರಿಸಿದ್ದೇವೆ ಎಂದು ವಿವರಿಸಿದರು.

ಹಸಿದವರಿಗೆ ಅನ್ನ, ಉದ್ಯೋಗ ನೀಡುತ್ತಿರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಜನರ ಶಕ್ತಿಯೇ ನಮ್ಮ ಶಕ್ತಿ. ಜನರೇ ನಮ್ಮ ಆಸ್ತಿ. ನಾನು ತಾಲೂಕು ಪಂಚಾಯ್ತಿ ಅಧ್ಯಕ್ಷನಾಗಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ಬೆಳೆಸಬೇಕು ಎಂಬ ರಾಜೀವ್ ಗಾಂಧಿ ಅವರ ಕಲ್ಪನೆ, ಈ ದೇಶದಲ್ಲಿ ಹೊಸ ನಾಯಕರನ್ನು ತಯಾರಾಗುವಂತೆ ಮಾಡಿದೆ. ಇದಕ್ಕಾಗಿ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತರಲಾಯಿತು.
ರಾಷ್ಟ್ರಪತಿಯಾಗಿದ್ದ ಮಾಜಿ ಸಿಎಂ ಬಿ.ಡಿ ಜತ್ತಿ ಬಿಜಾಪುರ ಜಿಲ್ಲೆಯ ಪಂಚಾಯ್ತಿ ಅಧ್ಯಕ್ಷರಾಗಿದ್ದರು, ವಿಲಾಸ್ ರಾವ್ ದೇಶಮುಖ್ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಪ್ರಥಮ ಪ್ರಧಾನಿ ನೆಹರೂ ಅವರು ಕೂಡ ಅಲಹಬಾದ್ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಕೂಡ ಬೆಂಗಳೂರು ಸಿಎಂಸಿ ಅಧ್ಯಕ್ಷರಾಗಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಗ್ರಾಮೀಣ ಭಾಗದ ಜನನರಿಗೆ ನಾಯಕತ್ವ ನೀಡಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಎಂದು ಹೇಳಿದರು.
ನರೇಗಾ ಯೋಜನೆಯಲ್ಲಿ ನನ್ನ ಕ್ಷೇತ್ರದಲ್ಲಿ 250 ಕೋಟಿಯಷ್ಟು ಕೆಲಸ ಮಾಡಿಸಿದ್ದೆ. ಇದನ್ನು ನೋಡಿ ಎಲ್ಲರೂ ಗಾಬರಿಯಾದರು. ಬಿಜೆಪಿ, ಕೇಂದ್ರ ಸರ್ಕಾರ ನಾನು ಹಣ ಲೂಟಿ ಮಾಡಿದ್ದೇನೆ, ಸುಳ್ಳು ಲೆಕ್ಕ ಕೊಟ್ಟಿದ್ದೇನೆ ಎಂದು ತಂಡಗಳನ್ನು ಕಳುಹಿಸಿ ಅನೇಕ ಕಡೆ ತನಿಖೆ ಮಾಡಿಸಿತು. ನಾನು 60-70 ಸಾವಿರ ಮನೆಗಳಿಗೆ ನರೇಗಾ ಯೋಜನೆ ಮೂಲಕ ಜಮೀನು ಮಟ್ಟ, ದನದ ಕೊಟ್ಟಿಗೆ, ಕೋಳಿ ಸಾಕಾಣೆ, ಆಶ್ರಯ ಮನೆ, ಇಂಗುಗುಂಡಿ, ಪಂಚಾಯ್ತಿ ಕಚೇರಿ, ಪಾರ್ಕ್ ನಿರ್ಮಾಣ ಹೀಗೆ ಏನೆಲ್ಲಾ ವ್ಯವಸ್ಥೆ ಇದೆ ಅದನ್ನು ಮಾಡಿದ್ದೆವು.
ಕುರಿ ಶೆಡ್ ಕಟ್ಟಲು 30-40 ಸಾವಿರ ನೆರವು ನೀಡಿದ್ದೆ. ಕೋವಿಡ್ ಸಮಯದಲ್ಲಿ ಪಂಚಾಯ್ತಿಯವರನ್ನು ಬಳಸಿಕೊಂಡು ಪ್ರತಿ ಕುಟುಂಬಕ್ಕೆ 10 ಸಾವಿರ ವೆಚ್ಚದ ಆಹಾರ ಸಾಮಗ್ರಿ ವಿತರಣೆ ಮಾಡಿದ್ದೆವು. ಇದಕ್ಕೆ ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಜಿಲ್ಲಾಧಿಕಾರಿ ಮೇಲೆ ದೂರು ನೀಡುತ್ತಿದ್ದರು. ಆಗ ನಾನು ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಕಾನೂನು ಪುಸ್ತಕ ತೆಗೆದು ನೋಡು. ನಮ್ಮ ಹಣದಲ್ಲಿ ಪಂಚಾಯ್ತಿ ತೀರ್ಮಾನ ಮಾಡಿದೆ ಎಂದು ಹೇಳಿದೆ. ಈ ಯೋಜನೆ ಜಾರಿ ಮಾಡಿದ್ದಕ್ಕೆ ನಮ್ಮ ತಾಲೂಕಿಗೆ ಪ್ರಶಸ್ತಿ ನೀಡಿದರು. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ನಮ್ಮ ತಾಲೂಕು ಪಂಚಾಯ್ತಿ ಅಧ್ಯಕ್ಷನಿಗೆ ಪ್ರಶಸ್ತಿ ನೀಡಿದರು ಎಂದು ತಿಳಿಸಿದರು.
ಎಲ್ಲಿಯವರೆಗೂ ನಿಮ್ಮಲ್ಲಿ ಪ್ರಾಮಾಣಿಕತೆ, ಬದ್ಧತೆ ಇರುತ್ತದೆ ಅಲ್ಲಿಯವರೆಗೂ ಕೆಲಸ ಮಾಡಲು ಅವಕಾಶವಿರುತ್ತದೆ. ನರೇಗಾ ವಿಚಾರದಲ್ಲಿ ನಾನು ಸೋನಿಯಾ ಗಾಂಧಿ ಹಾಗೂ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೆ. ನಾನು ಸಿದ್ದರಾಮಯ್ಯ ಅವರು ಬಳ್ಳಾರಿ ಪಾದಯಾತ್ರೆ ಮಾಡುವಾಗ ಮೊಳಲ್ಕಾಲ್ಮೂರು ಬಳಿ ಸುಮಾರು 50 ಮಹಿಳೆಯರು ತಮ್ಮ ಕಷ್ಟವನ್ನು ನಮ್ಮ ಬಳಿ ಹೇಳಿಕೊಂಡರು. ಅವರ ಕೂಲಿ 50 ರೂ. ಎಂದು ಹೇಳಿಕೊಂಡರು. ನಾನು ಈ ವಿಚಾರವನ್ನು ಸಿ.ಪಿ ಜೋಷಿ ಹಾಗೂ ಸೋನಿಯಾ ಗಾಂಧಿ ಅವರ ಮುಂದೆ ಪ್ರಸ್ತಾಪಿಸಿದೆ. ಆಗ ಸೋನಿಯಾ ಗಾಂಧಿ ಅವರು ಸಿ.ಪಿ ಜೋಷಿ ಅವರಿಗೆ ಸೂಚಿಸಿ, ರೈತರು ತಮ್ಮ ಸ್ವಂತ ಜಮೀನಿನಲ್ಲಿ ಮಟ್ಟ ಮಾಡಲು, ರೇಷ್ಮೆ ಸೇರಿದಂತೆ ಅನೇಕ ಬೆಳೆ ಹಾಕಲು ನರೇಗಾದಲ್ಲಿ ಹಣ ಪಡೆಯಲು ಅವಕಾಶ ಕಲ್ಪಿಸುವ ಕಾನೂನು ತಂದರು. ಈ ಯೋಜನೆಯನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.












Click it and Unblock the Notifications