ಕೀಟನಾಶಕಗಳೇ ಮುಳುವಾಯ್ತಾ? ವಿದೇಶಗಳಲ್ಲೇಕೆ ನಿಷೇಧವಾಗುತ್ತಿದೆ ಭಾರತದ ಆಹಾರ ಉತ್ಪನ್ನಗಳು ?
ಪ್ರಸ್ತುತ ಮಾವಿನ ಹಣ್ಣಿನ ಸೀಸನ್. ಎಲ್ಲಾ ಮಾರುಕಟ್ಟೆಯಲ್ಲೂ ರಸಭರಿತ ಮಾವಿನಹಣ್ಣು ನೋಡಲು ಸಿಗುತ್ತದೆ. ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಅಂದರೆ ವಾರ್ಷಿಕ 2.8 ಕೋಟಿ ಟನ್ ಮಾವು ಬೆಳೆಯುವ ದೇಶವಾಗಿದ್ದು, ಹಲವು ದೇಶಗಳಿಗೆ ರಫ್ತು ಮಾಡುತ್ತದೆ. ಆದರೆ, ಇತ್ತೀಚೆಗೆ ಜಪಾನ್ ಸೇರಿದಂತೆ ಕೆಲವು ದೇಶಗಳು ಭಾರತದ ಮಾವಿನಲ್ಲಿ ವಿಷಕಾರಿ ಅಂಶಗಳಿವೆ ಎಂದು ತಿರಸ್ಕರಿಸಿವೆ.
ಕೇವಲ ಮಾವು ಮಾತ್ರವಲ್ಲ, ಚೀನಾ ಭಾರತದ ಕೆಂಪು ಮೆಣಸಿನಕಾಯಿಯನ್ನು ತಿರಸ್ಕರಿಸಿದರೆ, ನೇಪಾಳ ಕೂಡ ಭಾರತದ ತರಕಾರಿ ಹಾಗೂ ಹಣ್ಣುಗಳನ್ನು ಇತ್ತೀಚೆಗೆ ಹಿಂದಿರುಗಿಸಿದೆ. ನಮ್ಮ ದೇಶದಲ್ಲಿ ಸರ್ಕಾರ ಎಷ್ಟೇ ಅಪಾಯಕಾರಿ ಕೆಮಿಕಲ್‌ಗಳನ್ನು ಬ್ಯಾನ್ ಮಾಡಿದರೂ, ಕೃಷಿ ವಲಯದಲ್ಲಿ ಮತ್ತು ಮಾರುಕಟ್ಟೆಯಲ್ಲಿ ರೈತರು ಹಾಗೂ ವ್ಯಾಪಾರಿಗಳು ಅವುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ಬಿಡುತ್ತಿಲ್ಲ ಎಂಬುದಕ್ಕೆ ಈ ಬೆಳವಣಿಗೆಗಳೇ ಪ್ರಮುಖ ಸಾಕ್ಷಿ.

ಯುರೋಪ್ ಒಕ್ಕೂಟದಿಂದ ಭಾರತದ ಆಹಾರ ಉತ್ಪನ್ನಗಳ ನಿಷೇಧ
ಮೇ 2024 ರಿಂದ ಯುರೋಪಿಯನ್ ಆಹಾರ ಸುರಕ್ಷತಾ ಸಂಸ್ಥೆಯು ಭಾರತದ 450ಕ್ಕೂ ಹೆಚ್ಚು ಆಹಾರ ಉತ್ಪನ್ನಗಳನ್ನು ತಿರಸ್ಕರಿಸಿದ್ದು, ಇದು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿದೆ. ಈ ಪೈಕಿ 365 ಉತ್ಪನ್ನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಕೀಟನಾಶಕ ಹಾಗೂ ರಾಸಾಯನಿಕಗಳು ಪತ್ತೆಯಾಗಿದ್ದರೆ, 50 ಉತ್ಪನ್ನಗಳಲ್ಲಿ 'ಅಫ್ಲಾಟಾಕ್ಸಿನ್' ನಂತಹ ಅಪಾಯಕಾರಿ ರೋಗಕಾರಕಗಳು ಕಂಡುಬಂದಿವೆ. ಮುಖ್ಯವಾಗಿ ಗೋಡಂಬಿ, ಸಾಂಬಾರ ಪದಾರ್ಥಗಳು, ಒಣಹಣ್ಣುಗಳು ಮತ್ತು ಕಾಳುಗಳಲ್ಲಿ ಕ್ಲೋರ್‌ಪೈರಿಫಾಸ್, ಎಥಿಲೀನ್ ಆಕ್ಸೈಡ್, ಕ್ಯಾಡ್ಮಿಯಂ ಹಾಗೂ ಸೀಸದಂತಹ ವಿಷಕಾರಿ ರಾಸಾಯನಿಕಗಳು ಇರುವುದು ದೃಢಪಟ್ಟಿದೆ.
ಆಹಾರದಲ್ಲಿ ಕೀಟನಾಶಕಗಳ ಬಳಕೆ: ವಿಷ ಸೇರುತ್ತಿರುವುದು ಹೇಗೆ?
ನಮ್ಮ ಆಹಾರದಲ್ಲಿ ವಿಷಕಾರಿ ರಾಸಾಯನಿಕಗಳು ಹಲವು ಹಂತಗಳಲ್ಲಿ ಸೇರುತ್ತಿವೆ. ಮೊದಲಿಗೆ, ಬೀಜಗಳನ್ನು ಸಂರಕ್ಷಿಸುವಾಗ ಕೀಟನಾಶಕಗಳನ್ನು ಬಳಸಲಾಗುತ್ತದೆ. ನಂತರ, ಹೆಚ್ಚಿನ ಇಳುವರಿಗಾಗಿ ರೈತರು ಮಿತಿಮೀರಿ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಹಾಕುತ್ತಾರೆ. ಕೊನೆಯದಾಗಿ, ಹಣ್ಣುಗಳು ಬೇಗ ಹಣ್ಣಾಗಲು ಮತ್ತು ಕೊಳೆಯದಂತೆ ತಡೆಯಲು ಮಾರುಕಟ್ಟೆಯ ವ್ಯಾಪಾರಿಗಳು ಕೂಡ ನಿಷೇಧಿತ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಈ ವಿಷಕಾರಿ ಅಂಶಗಳು ಆಹಾರ ಪದಾರ್ಥಗಳ ಆಳಕ್ಕೆ ಇಳಿಯುವುದರಿಂದ, ಇವುಗಳನ್ನು ಕೇವಲ ನೀರಿನಿಂದ ತೊಳೆದರೂ ಹೋಗದಷ್ಟು ಆಳವಾಗಿ ಉತ್ಪನ್ನಗಳಲ್ಲಿ ಸೇರಿಕೊಳ್ಳುತ್ತವೆ.
ಶೇ.28ರಷ್ಟು ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಪತ್ತೆ
2024ರಲ್ಲಿ ಪ್ರಕಟವಾದ 'ಭಾರತದಲ್ಲಿ ಆಹಾರ ಸಾಮಗ್ರಿಗಳಲ್ಲಿ ಕೀಟನಾಶಕಗಳ ಉಳಿಕೆ: ಒಂದು ಅವಲೋಕನ' ಎಂಬ ವರದಿಯು ಆತಂಕಕಾರಿ ಸತ್ಯ ಬಹಿರಂಗ ಪಡಿಸಿದೆ. ಕೇಂದ್ರ ಕೃಷಿ ಸಚಿವಾಲಯದ ಅಡಿಯಲ್ಲಿ 2018 ರಿಂದ 2023ರ ನಡುವೆ ದೇಶಾದ್ಯಂತ 1.30 ಲಕ್ಷಕ್ಕೂ ಹೆಚ್ಚು ಆಹಾರದ ಮಾದರಿಗಳನ್ನ ಪರೀಕ್ಷಿಸಲಾಗಿತ್ತು. ಈ ಪೈಕಿ ಶೇ. 28ರಷ್ಟು ಮಾದರಿಗಳಲ್ಲಿ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಉಳಿದ ಶೇ. 3.5ರಷ್ಟು ಮಾದರಿಗಳಲ್ಲಿ ಎಫ್‌ಎಸ್‌ಎಸ್‌ಎಐ ( FSSAI ) ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತಲೂ ಹೆಚ್ಚಿನ ಅಪಾಯಕಾರಿ ರಾಸಾಯನಿಕಗಳಿರುವುದು ದೃಢಪಟ್ಟಿದೆ.
ವಿದೇಶಗಳಲ್ಲಿ ನಮ್ಮ ಆಹಾರ ಉತ್ಪನ್ನಗಳು ತಿರಸ್ಕೃತವಾಗುತ್ತಿರುವುದು ಕೇವಲ ಆರ್ಥಿಕ ನಷ್ಟವಲ್ಲ; ಬದಲಿಗೆ ಅದೇ ವಿಷಕಾರಿ ಆಹಾರವನ್ನು ನಮ್ಮ ದೇಶದ ಜನರೂ ಕೂಡ ನಿತ್ಯ ಅದನ್ನೇ ಸೇವಿಸುತ್ತಿದ್ದಾರೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದರಿಂದಾಗಿ ದೇಶದಲ್ಲಿ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸರ್ಕಾರ, ರೈತರು ಮತ್ತು ವ್ಯಾಪಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸಾವಯವ ಅಥವಾ ಸುರಕ್ಷಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಾವು ಭೀಕರ ಆರೋಗ್ಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.














Click it and Unblock the Notifications