ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಈಗಲೂ ಎಕ್ಸಿಟ್ ಪೋಲ್ ಸುಳ್ಳಾಗಲಿವೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂನ್ 2: ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ, ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಈ ಕುರಿತು ಭಾನುವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆ ಸುಳ್ಳಾಯಿತು. ಆ ಚುನಾವಣೆಯಲ್ಲಿ ನನ್ನ ಭವಿಷ್ಯವೇ ನಿಜವಾಗಿತ್ತು ಎಂದು ಹೇಳಿದರು.

ಸಮೀಕ್ಷೆ ನಡೆಸುವ ಸಂಸ್ಥೆಗಳು ಐದು ಸಾವಿರದಷ್ಟು ಜನರ ಅಭಿಪ್ರಾಯ ಮಾತ್ರ ಸಂಗ್ರಹ ಮಾಡಿರುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ದಾಟಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ರಿಂದ 85 ಸ್ಥಾನ ಮಾತ್ರ ಕೊಟ್ಟಿದ್ದರು. 136 ಸ್ಥಾನ ಗೆಲ್ಲುತ್ತೇವೆ ಎಂದು ನನ್ನ ರಾಜಕೀಯ ಅನುಭವದ ಮೇಲೆ ಹೇಳಿದ್ದೆ. ಜೊತೆಗೆ ನಾನು ನಡೆಸಿದ್ದ ಖಾಸಗಿ ಸಮೀಕ್ಷೆ ಪ್ರಕಾರದಂತೆ ಜನ ನಮಗೆ 136 ಸ್ಥಾನ ನೀಡಿದರು.
ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ನಂಬಿಕೆ ಬಂದಿದೆ. ಇವು ನಮ್ಮ ಕೈ ಹಿಡಿಯಲಿವೆ. ಮೊದಲ ಹಂತದ ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ ಎಐಸಿಸಿ ನೀಡಿದ ಗ್ಯಾರಂಟಿಗಳ ಜನರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿವೆ. ಗ್ಯಾರಂಟಿಗಳು ದೇಶದ ಜನರ ಮನಸ್ಸು ಗೆದ್ದಿವೆ. ಕಾಂಗ್ರೆಸ್ ಅಭಿವೃದ್ಧಿ ವಿಚಾರಗಳ ಮೇಲೆ ಹಾಗೂ ಬಿಜೆಪಿಯವರು ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುತ್ತಾರೆ. ದೇಶದ ವಿಚಾರ ಹೇಳುವುದಿಲ್ಲ, ಕರ್ನಾಟಕದಲ್ಲಿ ಎರಡಂಕಿ ದಾಟುತ್ತೇವೆ ಎನ್ನುವ ಆತ್ಮ ವಿಶ್ವಾಸವಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಳೆಹಾನಿಯಾಗದಂತೆ ಮುಂಜಾಗ್ರತ ಕ್ರಮ
ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಯಾವುದೇ ಹಾನಿಯಾಗದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ಮಳೆ ನೀರಿನಿಂದ ತೊಂದರೆ ಆಗಬಾರದು ರಾಜಕಾಲುವೆಗಳ ನೀರಿನ ಹರಿವಿನ ಪ್ರಮಾಣ ಸೇರಿದಂತೆ ರಸ್ತೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಕಂಟ್ರೋಲ್ ರೂಮ್ ಅವರು ಜಾಗೃತರಾಗಿದ್ದಾರೆ. ಮಳೆ ಹೆಚ್ಚು ಬೀಳುತ್ತಿದ್ದು ಶಾಸಕಾಂಗ ಸಭೆಗೆ ಬರುವ ಹೊತ್ತಿನಲ್ಲಿ ರಸ್ತೆಯಲ್ಲಿ ಎರಡರಿಂದ ಮೂರು ಅಡಿ ನೀರು ಹರಿಯುತ್ತಿತ್ತು. ಇಂದು ರಾತ್ರಿಯೆಲ್ಲಾ ನಾನು ಸಹ ಪರಿಶೀಲನೆ ನಡೆಸುತ್ತೇನೆ.
ಶಾಸಕಾಂಗ ಸಭೆ ನಡೆಸಿದ ಉದ್ದೇಶದ ಬಗ್ಗೆ ಮಾತನಾಡಿದ,ಜೂ.3 (ಸೋಮವಾರ) ಬೆಳಿಗ್ಗೆ 10 ಗಂಟೆಗೆ ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಇದು ಬಿಟ್ಟು ಬೇರೆ ಯಾವ ವಿಷಯವು ಚರ್ಚೆಯಾಗಿಲ್ಲ ಎಂದು ಹೇಳಿದರು.












Click it and Unblock the Notifications