ಎಚ್ಚರ! ಡೆಂಗ್ಯೂ ಮೃತರ ಸಂಖ್ಯೆ ಹೆಚ್ಚಳ; ಎಲ್ಲೆಲ್ಲಿ?
ಬೆಂಗಳೂರು, ಆಗಸ್ಟ್ 25: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಜ್ವರ ಮತ್ತೆ ತಾಂಡವವಾಡುತ್ತಿದೆ. ನಿನ್ನೆ ಹೊಸದಾಗಿ 196 ಡೆಂಗ್ಯೂ ಕೇಸ್‌ಗಳು ರಾಜ್ಯದಲ್ಲಿ ದೃಢಪಪಟ್ಟಿದ್ದು, ಸದ್ಯ 1,229 ಡೆಂಗ್ಯೂ ಕೇಸ್‌ಗಳು ಸಕ್ರಿಯವಾಗಿವೆ. ಡೆಂಗ್ಯೂ ದೃಢಪಟ್ಟವರಲ್ಲಿ 206 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದವರ ಬಗ್ಗೆಯೂ ಮಾಹಿತಿ ನೀಡಿದ್ದು, ದಾವಣಗೆರೆ ಹಾಗೂ ಧಾರವಾಡದಲ್ಲಿ ತಲಾ ಒಬ್ಬರು ಡೆಂಗ್ಯೂನಿಂದ ಮರಣ ಹೊಂದಿದ್ದಾರೆ. ಇದರಿಂದ ರಾಜ್ಯದಲ್ಲಿ ಡೆಂಗ್ಯೂನಿಂದ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ರಾಜ್ಯದ ಹಲವೆಡೆ ಡೆಂಗ್ಯೂನಿಂದ ಮರಣವಾದ ಕೇಸ್‌ಗಳು ವರದಿಯಾದರೂ ಇದರ ಡೆತ್ ಆಡಿಟ್ ಸಿದ್ಧಗೊಂಡು ಇಲಾಖೆಗೆ ಸಲ್ಲಿಸಲಾಗುತ್ತದೆ. ಬಳಿಕ ಅದನ್ನು ಅಧಿಕೃತವಾಗಿ ಸಾವನ್ನಪ್ಪಿದವರ ಮಾಹಿತಿ ಬಹಿರಂಗಪಡಿಸಲಾಗುತ್ತಿದೆ.

ಡೆಂಗ್ಯೂ ಪತ್ತೆಯಾದವರ ಪೈಕಿ ಹಲವರು ಮನೆಯಲ್ಲೇ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಡೆಂಗ್ಯೂ ಪತ್ತೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ 1.65 ಲಕ್ಷ ಮಂದಿಗೆ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಒಟ್ಟು 23,526 ಡೆಂಗ್ಯೂ ಕೇಸ್‌ಗಳು ದೃಢಪಟ್ಟಿವೆ.
ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 10 ಸಾವಿರ ಗಡಿ ದಾಟಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಮೊನ್ನೆಯಷ್ಟೇ 199 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, 1182 ಕೇಸ್‌ಗಳು ಸಕ್ರಿಯವಾಗಿದ್ದವು. ಮೂಲಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದರೆ ಬೆಂಗಳೂರಿನಲ್ಲೇ 10,511 ಡೆಂಗ್ಯೂ ಸೋಂಕಿತರಿದ್ದಾರೆ ಎಂದು ವರದಿಯಾಗಿತ್ತು. ಇತ್ತೀಚಿಗೆ ಸತತವಾಗಿ ಸುರಿದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ 7 ವರ್ಷದ ಬಾಲಕ ಡೆಂಗ್ಯೂಗೆ ಬಲಿಯಾಗಿದ್ದಾನೆ. ಮೃತ ಬಾಲಕನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಉದ್ಯಾನನಗರಿ ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆಗೆ ಕಳೆದ ವಾರದಿಂದ ಝಿಕಾ ವೈರಸ್ ಕೂಡ ತಾಂಡವವಾಡುತ್ತಿದೆ. ನಗರದ ಜಿಗಣಿ ಪ್ರದೇಶದಲ್ಲೇ ಎರಡು ವಾರಗಳಲ್ಲಿ ಒಟ್ಟು ಐದು ಝಿಕಾ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿತ್ತು. ಇದರ ಜೊತೆ ಜೊತೆಗೆ ಡೆಂಗ್ಯೂ ಕೇಸ್‌ಗಳು ಕೂಡ ಏರುತ್ತಿರುವುದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.
ಡೆಂಗ್ಯೂ ನಿಯಂತ್ರಣಕ್ಕೆ ನಿಮ್ಮ ಮನೆಯ ಸುತ್ತ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ. ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ಸೊಳ್ಳೆ ಬತ್ತಿ ಹಚ್ಚಿರಿ ಅಥವಾ ಸೊಳ್ಳೆ ಪರದೆಯನ್ನು ಸುರಕ್ಷತೆಗೆ ಬಳಸಿಕೊಳ್ಳಬಹುದು.ಕೈ, ಕಾಲಿಗೆ ಸೊಳ್ಳೆ ನಿವಾರಕ ಲೋಶನ್ ಅಥವಾ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ಡೆಂಗ್ಯೂ ಜ್ವರ ಬರದಂತೆ ತಡೆಯಬಹುದು ಎನ್ನುತ್ತಾರೆ ವೈದ್ಯರು. ಸಾಧ್ಯವಾದಷ್ಟು ಮೈ ತುಂಬಾ ಬಟ್ಟೆ ಧರಿಸಿ. ಡೆಂಗ್ಯೂ ಜ್ವರದ ಲಕ್ಷಣ ಕಂಡುಬಂದರೆ ಗಾಬರಿಯಾಗದೆ, ವೈದ್ಯರನ್ನು ಭೇಟಿ ಮಾಡಿ. ಅವರ ಸೂಚನೆಯನ್ನು ಸರಿಯಾಗಿ ಪಾಲಿಸಿದರೆ ಡೆಂಗ್ಯೂದಿಂದ ಶೀಘ್ರ ಗುಣಮುಖ ಆಗಬಹುದು.












Click it and Unblock the Notifications