Lakshmi Hebbalkar : ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದ ಒಕ್ಕಲಿಗ ಸ್ವಾಮೀಜಿ: ಲಕ್ಷ್ಮೀ ಹೆಬ್ಬಾಳ್ಕರ್ ಗರಂ
ವಿಜಯಪುರ, ನವೆಂಬರ್ 28: ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು' ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ. ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಈ ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗೂ ಒಂದೇ ಕಾನೂನು, ಜನಸಾಮಾನ್ಯರಿಗೂ ಒಂದೇ ಕಾನೂನು. ಸ್ವಾಮೀಜಿಯವರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಇಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಾನು ಕರ್ನಾಟಕದ ಮಂತ್ರಿಯಾಗಿದ್ದರೂ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗಲೂ ಸಕ್ರಿಯವಾಗಿರುವೆ. ಮಂತ್ರಿಯಾಗಿರುವ ಕಾರಣ ಕೆಲಸದ ಒತ್ತಡದಿಂದಾಗಿ ಮೀಸಲಾತಿ ಹೋರಾಟದ ಒಂದೆರಡು ಸಭೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನನ್ನ ತಮ್ಮ ಹಾಗೂ ನನ್ನ ಮಗ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಪಂಚಮಸಾಲಿ ಸಮಾಜ ಸದಾ ನನ್ನೊಂದಿಗಿದೆ. ನಾನು ಕೂಡ ಯಾವಾಗಲೂ ಸಮಾಜದ ಜೊತೆ ಇರುವೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಭಾರಿ ಭೇಟಿಯಾಗಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಲಾಗಿದೆ. ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದರು. ಇನ್ನೂ ಸಚಿವ ಸಂಪುಟ ಪುನಾರಚನೆ ಕುರಿತು ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ, ಹೈಕಮಾಂಡ್ ಕೂಡ ಅಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ 'ಶಕ್ತಿ ಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಕನ್ನಡದ ಪ್ರಪ್ರಥಮ ಮಹಿಳಾ ಕವಿಯತ್ರಿಯಾದ ಅಕ್ಕಮಹಾದೇವಿ ಅವರು ನಮ್ಮೆಲ್ಲರ ಆದರ್ಶವಾಗಿದ್ದಾರೆ ಎಂದರು.
ನಾನೊಬ್ಬಳು ತಾಯಿಯಾಗಿ, ರೈತನ ಮಗಳಾಗಿ, ಹಲವು ಏಳು ಬೀಳುಗಳ ನಡುವೆ ಇಂದು ಕರ್ನಾಟಕದ ಮಂತ್ರಿಯಾಗಿರುವೆ. ಪುರುಷರಿಗೆ 100 ಮೀಟರ್ ಓಡಿದರೂ ಗೋಲ್ಡ್ ಮೆಡಲ್ ಸಿಗುತ್ತದೆ. ಆದರೆ, ಸಾವಿರ ಮೀಟರ್ ಓಡಿದರೂ ಮಹಿಳೆಯರಿಗೆ ಮೆಡಲ್ ಕೊಡಲು ಹಿಂದೆ ಮುಂದೆ ನೋಡಲಾಗುತ್ತದೆ ಎಂದು ಸಚಿವರು ಹೇಳಿದರು. ಹೆಣ್ಣು ಮಕ್ಕಳಲ್ಲಿ ಪರಸ್ಪರ ಸಹಕಾರ ಇರಬೇಕು. ಇಂದು ಹೆಣ್ಣು ಮಕ್ಕಳು ತೊಟ್ಟಿಲಿಗೆ ಸೀಮಿತವಿಲ್ಲ. ಇಂದು ಹೆಣ್ಣು ಹುಟ್ಟಿದರೂ ಸಂಭ್ರಮ ಪಡುವ ಸಂದರ್ಭದಲ್ಲಿ ನಾವಿದ್ದೇವೆ. ಸುಂದರ ಸಮಾಜ, ಸಂಸ್ಕೃತಿ ದೇಶದಲ್ಲಿ ನಾವಿದ್ದೇವೆ ಎಂದು ಹೇಳಿದರು.
ಕಷ್ಟ ಎಲ್ಲರಿಗೂ ಇರುತ್ತದೆ. ಆದರೆ ಗುರಿ ತಲುಪುವುದು ಮುಖ್ಯ, ಗುರಿ ಇಲ್ಲದ ಜೀವನ ಬೋರಗಲ್ಲ ಮೇಲೆ ಮಳೆ ಸುರಿದಂತೆ. ಪ್ರಾಮಾಣಿಕವಾದ ಗುರಿ ಇರಬೇಕು. ಪ್ರತಿಯೊಬ್ಬರು ತಂದೆ ತಾಯಿ ಕನಸುಗಳನ್ನು ಈಡೇರಿಸಬೇಕು. ನಾನೂ ಕೂಡ ಹಿಂದುಳಿದ ಪ್ರದೇಶದಿಂದ ಬಂದಿದ್ದೇನೆ. ಕೆಂಪು ಬಸ್ಸಿನಲ್ಲಿ ಓಡಾಡಿದ್ದೇನೆ. ಇಂದಿಗೂ ಅದೇ ಛಲ ನನ್ನಲ್ಲಿದೆ. ಇರುವೆಗಳಿಗೂ ಸ್ವಾಭಿಮಾನ ಇರುತ್ತದೆ. ಮುಂದಾಲೋಚನೆ ಇರುತ್ತದೆ. ಮನುಷ್ಯರಾದ ನಮಗೆ ಮುಂದಿನ 80 ವರ್ಷಕ್ಕೆ ಜೀವನ ರೂಪಿಸುವ ಪರಿಕಲ್ಪನೆ ಬೇಕಲ್ಲವೇ. ವಿದ್ಯಾರ್ಥಿ ಜೀವನ ಗೋಲ್ಡನ್ ಟೈಮ್ ಇದ್ದಂತೆ. ಜೀವನ ವಿಕಸನ ಮಾಡಿಕೊಳ್ಳಲು ಇದು ಪ್ರಮುಖ ಘಟ್ಟ. ದೇಶ ಎತ್ತರಕ್ಕೆ ಬೆಳೆಯುತ್ತಿದೆ, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದರು.












Click it and Unblock the Notifications