ಕಾರ್ಪೊರೇಟ್ ಕೆಲಸ ಬಿಟ್ಟು ಹಳ್ಳಿ ಸೇರಿ ಮಹಿಳೆಯರಿಗೆ ಆಸರೆಯಾದ ಮೈಸೂರಿನ ಸುಹಾಸ್: ಬಡತನದಿಂದ ಕೋಟ್ಯಾಧಿಪತಿಯಾಗಿ ಬೆಳೆದ ಯುವಕನ ಕಥೆ

ಬಾಲ್ಯದಲ್ಲಿ ಬಡತನ, ಬೆಳೆಯುತ್ತಾ ಶ್ರೀಮಂತಿಕೆಯ ಕನಸು, ಆ ನಂತರ ಕಾರ್ಪೊರೇಟ್ ಜಗತ್ತಿನಲ್ಲಿ ಕೈತುಂಬಾ ಸಂಬಳ. ಇಷ್ಟೆಲ್ಲಾ ಸಾಧಿಸಿದ ಮೇಲೆ ಇದ್ದಕ್ಕಿದ್ದಂತೆ ಜೀವನದ ಅರ್ಥ ಹುಡುಕುತ್ತಾ ಕಾಡಂಚಿನ ಹಳ್ಳಿಗೆ ತೆರಳಿ, ಅಲ್ಲಿನ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿದ ಮೈಸೂರಿನ ಯುವಕನ ಕಥೆ ಇದು.

ಹೌದು, ಎಕ್ಸ್ ಖಾತೆಯಲ್ಲಿ ವಸಂತ್ ಶೆಟ್ಟಿ ಎಂಬುವವರು ಹಂಚಿಕೊಂಡಿರುವ ಸುಹಾಸ್ ಅವರ ಈ ಸ್ಫೂರ್ತಿದಾಯಕ ಪಯಣ ಎಲ್ಲರ ಗಮನ ಸೆಳೆಯುತ್ತಿದೆ.

The Good Doll How A Mysuru Boy Left Corporate Life To Empower Ooty Women Through Upcycled Dolls

ಶಾಲಾ ದಿನಗಳಲ್ಲಿ ಇದ್ದ ಕೇವಲ ಒಂದೆರಡು ಜೊತೆ ಬಟ್ಟೆಗಳನ್ನೇ ಧರಿಸುತ್ತಿದ್ದ ಮೈಸೂರಿನ ಸುಹಾಸ್ ಅವರನ್ನ, ಅವರ ಸ್ನೇಹಿತರು ಗೇಲಿ ಮಾಡುತ್ತಿದ್ದರು. ಆಗಲೇ, ಬೆಳೆದು ದೊಡ್ಡವನಾದ ಮೇಲೆ ಸಾಕಷ್ಟು ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸಬೇಕು ಎಂಬ ಹಠ ಅವರಲ್ಲಿ ಮೂಡಿತ್ತು.

ಎಂ.ಬಿ.ಎ ಮುಗಿಸಿ, ಕೇವಲ 6,000 ರೂಪಾಯಿಗಳ ಸ್ಟೈಫಂಡ್‌ನೊಂದಿಗೆ ಇಂಟರ್ನ್ ಆಗಿ ವೃತ್ತಿಜೀವನ ಆರಂಭಿಸಿದ ಸುಹಾಸ್, ತಮ್ಮ ಕಠಿಣ ಪರಿಶ್ರಮದಿಂದ ಶೆಲ್ ಮತ್ತು ಬ್ಯಾಂಕ್ ಆಫ್ ಅಮೆರಿಕಾದಂತಹ ಫಾರ್ಚೂನ್ 500 ಕಂಪನಿಗಳಲ್ಲಿ ಉನ್ನತ ಹುದ್ದೆಗೇರಿದರು. ಬಾಲ್ಯದ ಕನಸಿನಂತೆ ಐಷಾರಾಮಿ ಕಾರು, ದುಬಾರಿ ಬಟ್ಟೆ, ರಜೆಗಳು ಹೀಗೆ ಎಲ್ಲವನ್ನೂ ಅನುಭವಿಸಿದರು.

ಕಾರ್ಪೊರೇಟ್ ಲೈಫ್ ಬಿಟ್ಟು ಹಳ್ಳಿಯತ್ತ ಮುಖ ಮಾಡಿದ ದಂಪತಿ

ಎಲ್ಲವೂ ಇದ್ದರೂ ಒಂದು ಹಂತದಲ್ಲಿ ಸುಹಾಸ್ ಅವರಿಗೆ ಜೀವನದ ನಿಜವಾದ ಉದ್ದೇಶದ ಬಗ್ಗೆ ಪ್ರಶ್ನೆ ಮೂಡಿತು. ಈ ಐಷಾರಾಮಿ ಜೀವನ ಸಾಕು ಎನಿಸಿದಾಗ, ಸುಹಾಸ್ ಮತ್ತು ಅವರ ಪತ್ನಿ ಸುನಿತಾ ದಂಪತಿ ತಮ್ಮ ಮಗುವಿನೊಂದಿಗೆ ಊಟಿಯ ಬಳಿಯಿರುವ ಕಾಡಂಚಿನ ಪುಟ್ಟ ಗ್ರಾಮವೊಂದಕ್ಕೆ ವಾಸ್ತವ್ಯ ಬದಲಾಯಿಸಿದರು. ಮಗುವನ್ನ ಶಾಲೆಯಿಂದ ಬಿಡಿಸಿ, ಮನೆಯಲ್ಲೇ ಶಿಕ್ಷಣ (ಹೋಮ್ ಸ್ಕೂಲಿಂಗ್) ನೀಡಲಾರಂಭಿಸಿದರು.

ಜನಸಂದಣಿಯಿಂದ ದೂರವಿದ್ದ, ಕಾಡು ಪ್ರಾಣಿಗಳ ಹಾವಳಿ ಇದ್ದ ಆ ಪ್ರದೇಶದಲ್ಲಿ, ಊರಿನ ಮುಗ್ಧ ಜನ ಈ ಹೊಸಬರ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದರು. ಗ್ರಾಮಸ್ಥರ ಈ ಪ್ರೀತಿ, ಆ ದಂಪತಿಯನ್ನ ಮತ್ತೆ ಸಮಾಜದೊಂದಿಗೆ ಬೆರೆಯುವಂತೆ ಮಾಡಿತು.

ಊಟಿಯಲ್ಲಿ ಮಹಿಳಾ ಸಬಲೀಕರಣಕ್ಕೆ ನಾಂದಿ

ಗ್ರಾಮಸ್ಥರೊಂದಿಗೆ ಬೆರೆಯುತ್ತಿದ್ದಂತೆ, ಅಲ್ಲಿನ ಮಹಿಳೆಯರು ಜೀವನೋಪಾಯಕ್ಕಾಗಿ ಪಡುತ್ತಿರುವ ಕಷ್ಟಗಳು ಸುಹಾಸ್ ದಂಪತಿಗೆ ಅರಿವಾಯಿತು. ಬ್ಯಾಂಕ್ ಖಾತೆಯಲ್ಲಿ ಹಣವಿದ್ದ ಕಾರಣ ತಮಗೆ ಆ ಕಷ್ಟಗಳ ಅರಿವಾಗಿರಲಿಲ್ಲ ಎನ್ನುವುದನ್ನ ಅರ್ಥಮಾಡಿಕೊಂಡ ದಂಪತಿ, ಆ ಮಹಿಳೆಯರಿಗಾಗಿ ಹೊಸ ಆದಾಯದ ಮೂಲವೊಂದನ್ನ ಸೃಷ್ಟಿಸಲು ನಿರ್ಧರಿಸಿದರು.

ಕರಕುಶಲ ಕಲೆಗಳಲ್ಲಿ ಪರಿಣಿತರಾಗಿದ್ದ ಸುನಿತಾ ಅವರು ಹಳ್ಳಿಯ ಮಹಿಳೆಯರಿಗೆ ತರಬೇತಿ ನೀಡಲಾರಂಭಿಸಿದರು. ಕೋವಿಡ್ ಸಮಯದಲ್ಲಿ ಇವರು ತಯಾರಿಸಿದ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಬಂತು. ಈ ಸಣ್ಣ ಪ್ರಯತ್ನವೇ ಮುಂದೆ ದಿ ಗುಡ್ ಡಾಲ್ ಎಂಬ ವಿನೂತನ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.

ವಿದೇಶಿ ಗೊಂಬೆಗಳಿಗೆ ಸೆಡ್ಡು ಹೊಡೆದ ನಿಲಾ ಅಪ್‌ಸೈಕಲ್ಡ್ ಡಾಲ್ಸ್

ನಮ್ಮ ಮಕ್ಕಳು ಆಡುವ ಬಹುತೇಕ ಗೊಂಬೆಗಳು ಚೀನಾ ಅಥವಾ ಪಾಶ್ಚಿಮಾತ್ಯ ದೇಶಗಳಲ್ಲಿ ತಯಾರಾದವು. ಅವುಗಳ ಬಣ್ಣ, ಮೈಕಟ್ಟು ಯಾವುದೂ ನಮ್ಮ ಮಕ್ಕಳನ್ನ ಹೋಲುವುದಿಲ್ಲ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸುಹಾಸ್ ದಂಪತಿ, ಮರುಬಳಕೆಯ ಬಟ್ಟೆಗಳಿಂದ ನಮ್ಮದೇ ದೇಶದ ಮಕ್ಕಳಂತೆ ಕಾಣುವ 'ನಿಲಾ' ಎಂಬ ಗೊಂಬೆಗಳನ್ನ ತಯಾರಿಸಲು ಶುರು ಮಾಡಿದರು.

ಇಂದು ದಿ ಗುಡ್ ಡಾಲ್ ಸಂಸ್ಥೆಯ 'ನಿಲಾ' ಗೊಂಬೆಗಳು ಹಾಗೂ 'ನಿಲಾವರ್ಸ್' ಪರಿಕಲ್ಪನೆಯು ಭಾರತದಾದ್ಯಂತ 1,00,000ಕ್ಕೂ ಹೆಚ್ಚು ಮನೆಗಳನ್ನ ತಲುಪಿವೆ. ಈ ಯೋಜನೆ ಮೂಲಕ ನೀಲಗಿರಿ ಭಾಗದ 100ಕ್ಕೂ ಹೆಚ್ಚು ಮಹಿಳೆಯರಿಗೆ ತಿಂಗಳಿಗೆ ಸರಾಸರಿ 12,000 ರೂಪಾಯಿ ಆದಾಯ ಸಿಗುತ್ತಿದೆ. ಅಷ್ಟೇ ಅಲ್ಲದೆ, ಕಸದ ಬುಟ್ಟಿ ಸೇರಬೇಕಿದ್ದ ಸುಮಾರು 30,000 ಕೆ.ಜಿ ಬಟ್ಟೆಯನ್ನು ಮರುಬಳಕೆ ಮಾಡಿ ಪರಿಸರ ಸಂರಕ್ಷಣೆಗೂ ಕೊಡುಗೆ ನೀಡಲಾಗಿದೆ.

ಬಡತನದಿಂದ ಸಿರಿವಂತಿಕೆಗೆ, ಅಲ್ಲಿಂದ ಸರಳತೆಯ ಮೂಲಕ ನೂರಾರು ಬಡ ಕುಟುಂಬಗಳಿಗೆ ಆಸರೆಯಾದ ಸುಹಾಸ್ ಅವರ ಈ ಪ್ರಯಾಣ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+