ಎಂಎಲ್‌ಎ ಹರೀಶ್ ಗೌಡಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಸೆರೆ
ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರನ್ನು ಹನಿಟ್ರ್ಯಾಪ್ ಮಾಡಿ ಬ್ಲಾಕ್‍ಮೇಲ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಸಂತೋಷ್ ಹಾಗೂ ಪುಟ್ಟರಾಜು ಬಂಧಿತ ಆರೋಪಿಗಳು. ಇವರು ವಿಶಿಷ್ಟ ವಿಧಾನ ಅನುಸರಿಸಿ, ಹೋಟೆಲ್‌ಗಳ ರೂಮಿನಲ್ಲಿ ಉಳಿದುಕೊಳ್ಳುತ್ತಿದ್ದ ಗಣ್ಯ ವ್ಯಕ್ತಿಗಳು, ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಏನಿದು ಘಟನೆ?
ವಿಶ್ವವಿದ್ಯಾಲಯ ಕುಲಪತಿಯೊಬ್ಬರು ಹನಿಟ್ರ್ಯಾಪ್ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದರು. ಈ ಬಗ್ಗೆ ಶಾಸಕ ಹರೀಶ್ ಗೌಡ ಅವರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಹರೀಶ್ ಗೌಡ ಅವರು ದೂರು ನೀಡಿ ಕುಲಪತಿಗೆ ಧೈರ್ಯ ಹೇಳಿದ್ದರು. ನಂತರ ಆರೋಪಿಗಳ ಗ್ಯಾಂಗ್ ಪುನಃ ಶಾಸಕ ಹರೀಶ್ ಗೌಡ ವಿರುದ್ಧವೇ ಸುಳ್ಳು ಹನಿಟ್ರ್ಯಾಪ್ ಮಾದರಿ ವಿಡಿಯೋ ಸೃಷ್ಟಿಸಿ ಬೆದರಿಕೆ ಹಾಕಲು ಮುಂದಾಗಿದ್ದರು.
ದೂರು ದಾಖಲು
ಈ ಸಂಬಂಧ ಶಾಸಕ ಹರೀಶ್ ಗೌಡ ಅವರು ಬೆಂಗಳೂರಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರು ನೀಡಿದ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.
ವಿಐಪಿಗಳೇ ಇವರ ಟಾರ್ಗೆಟ್
ಈ ಗ್ಯಾಂಗ್ ವಿಐಪಿಗಳು ಉಳಿದುಕೊಳ್ಳುವ ಹೋಟೆಲ್ ರೂಂಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಗಣ್ಯರು ಯಾವಾಗ ಹೋಟೆಲ್ ಗೆ ಬರುತ್ತಾರೆ ಹೋಗುತ್ತಾರೆ ಎಂಬಿತ್ಯಾದಿ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು. ಈ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ಗ್ಯಾಂಗ್‌ನಲ್ಲಿ ಓರ್ವ ಯುವತಿ ಕೂಡ ಭಾಗಿಯಾಗಿದ್ದಾಳೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications