ʼಸಿದ್ದರಾಮಯ್ಯ ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆʼ
ಬೆಂಗಳೂರು, ಆಗಸ್ಟ್ 27: ವೈಟ್ನರ್ ಬಳಿದಿದ್ದ ದಾಖಲೆಗಳಿಗೆ ಟಾರ್ಚ್ ಹಾಕಿ ತೋರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಶಿಶುಪಾಲನ ಹಾಗೆ ತಪ್ಪಿನ ತಪ್ಪು ಮಾಡುತ್ತಿದ್ದೀರಿ ಚಾಟಿ ಬೀಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.

ಇದು ಮೂಲ ದಾಖಲೆ, ಮೂಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು? ನಿಮಗೆ ಈ ಮೂಲ ದಾಖಲೆ ತಂದು ಕೊಟ್ಟ ಮಹಾಶಯರು ಯಾರು? ಇಷ್ಟಕ್ಕೂ ಈ ಮೂಲ ದಾಖಲೆ ಮೂಡಾದಲ್ಲಿದೆಯಾ? ಅಥವಾ ನಿಮ್ಮ ಮನೆಯಲ್ಲಿದೆಯಾ? ಈ ಮೂಲ ದಾಖಲೆಗೆ ಟಾರ್ಚ್ ಹಾಕಿದವರು ಯಾರು? ನೀವಾ..? ಅಥವಾ ಇನ್ನಾರಾದರೂ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ ಅವರು.
ಮಾನ್ಯ @siddaramaiah ನವರೇ..
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 26, 2024
•ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ.
•ಇದು ಮೂಲ ದಾಖಲೆ, ಮೂಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು?
•ನಿಮಗೆ ಈ ಮೂಲ ದಾಖಲೆ ತಂದು ಕೊಟ್ಟ ಮಹಾಶಯರು ಯಾರು?
•ಇಷ್ಟಕ್ಕೂ ಈ ಮೂಲ ದಾಖಲೆ… pic.twitter.com/ksitsvDP2G
ನನ್ನ ಪ್ರಶ್ನೆ ಇಷ್ಟೇ, ಈ ದಾಖಲೆಯನ್ನೇಕೆ ನೀವು ಕೋರ್ಟ್‌ಗೆ ಕೊಟ್ಟಿಲ್ಲ!? ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ದಿಕ್ಕು ತಪ್ಪಿಸಿದ ಹಾಗೇ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ಕೊಟ್ಟು ಅಲ್ಲಿಯೂ ಟಾರ್ಚ್ ಬಿಟ್ಟು ತೋರಿಸುತ್ತೀರಾ.., ಹೇಗೆ? ಎಂದು ಸಿಎಂ ಅವರ ಕಾಲೆಳೆದಿದ್ದಾರೆ ಸಚಿವರು. ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀರಿ.. ಶಿಶುಪಾಲನ ಹಾಗೆ!! ಮಾಡಿದ ತಪ್ಪು ಮುಚ್ಚಿಕೊಳ್ಳಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ ಅವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದೇನು?
ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹೆಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ - ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಹಂಚಿಕೊಂಡಿದ್ದಾರೆ.
ನನ್ನ ಪತ್ನಿ ಬದಲೀ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ "ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ" ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ.
"ವೈಟ್ನರ್ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್ ಹಚ್ಚಿ ಬಂದಿದ್ದಾರೆಂದು" ಬೊಬ್ಬೆ ಹಾಕುತ್ತಿದ್ದ ಸ್ವಯಂ ಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ? ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ ಕತೆ.
ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ - ಜೆಡಿಎಸ್ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ. ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications