ಅಮೆಜಾನ್ ನಲ್ಲಿ ವೀಳ್ಯದೆಲೆ ಮಾರಾಟ!
ಕಾರವಾರ, ಅಕ್ಟೋಬರ್ 06: ಚಿಕ್ಕಪುಟ್ಟ ಕಿರಾಣಿ ಸಾಮಾನಿನಿಂದ ಹಿಡಿದು ದೊಡ್ಡ ದೊಡ್ಡ ವಸ್ತುಗಳು ಈಗ ಆನ್ ಲೈನ್ ನಲ್ಲೇ ಲಭ್ಯವಾಗುತ್ತಿವೆ. ಹಾಗಂತ ಯಾರೂ ನೋಡಿರದ, ಕೇಳಿರದ ವಸ್ತುವೊಂದು ಕೂಡ ಅಮೆಜಾನ್ ನಲ್ಲಿ ಸಿಗ್ತಾ ಇದೆ. ಅದು ಏನು ಅಂತೀರಾ ಮುಂದೆ ಓದಿ.
ಅಮೆಜಾನ್ ನಲ್ಲಿ ವೀಳ್ಯದೆಲೆಯನ್ನು ಮಾರಾಟ ಮಾಡಲಾಗುತ್ತಿದೆ. ಸೌರ್ಸೋಪ್ ಸರ್ವೀಸ್ ಎನ್ನುವವರಿಂದ ಎಲೆಗಳನ್ನ ಮಾರಾಟ ಮಾಡಲಾಗುತ್ತಿದ್ದು, 100ಎಲೆಗೆ 299 ಹಾಗೂ ಅದರ ಡೆಲಿವರಿಗೆ ಹೆಚ್ಚುವರಿಯಾಗಿ 100 ರೂಪಾಯಿ ಕೊಡಬೇಕಾಗುತ್ತದೆ.

ಇನ್ನು ಹಬ್ಬಕ್ಕಾಗಿ 2 ಸ್ಪೆಷಲ್ ಆಫರ್ ಗಳನ್ನು ಇಲ್ಲಿ ನೀಡಲಾಗಿದೆ. ಅಮೆಜಾನ್ ಪೇ ಬ್ಯಾಲೆನ್ಸ್ ನಿಂದ ಪಾವತಿ ಮಾಡಿದರೆ ಶೇ 15 ಕ್ಯಾಶ್ ಬ್ಯಾಕ್, ಸಿಟಿ ಬ್ಯಾಂಕ್ ಕಾರ್ಡಿನಿಂದ ಪಾವತಿಸಿದರೆ ಶೇ 10ರಷ್ಟು ರಿಯಾಯಿತಿ ನೀಡಲಗುತ್ತಿದೆ. ಅಲ್ಲದೇ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಕೂಡ ಇದರಲ್ಲಿ ನೀಡಲಾಗಿದೆ.
ವೀಳ್ಯದೆಲೆ ಪಾಚಿ ಹಸುರಿನ, ತೆಳುವಿನ, ತಣ್ಣಗಿನ, ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲಾಗುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ರಾಮಬಾಣವಾಗಿದೆ.
ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ.
ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ.
ಜತೆಗೆ ಮದುವೆ, ಮುಂಜಿ ಸೇರಿದಂತೆ ಬಹುತೇಕ ಎಲ್ಲ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು.
ಫಲತಾಂಬೂಲ' ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನಗರ, ಮಹಾನಗರಗಳಲ್ಲಿ ಈ ಎಲೆಗಳು ತೀರಾ ಕಡಿಮೆಯಾಗಿರುವುದರಿಂದ ಕರಾವಳಿ, ಮಲೆನಾಡು ಜಿಲ್ಲೆಗಳಿಂದ ಪಡೆದು ಆನ್ ಲೈನ್ ನಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.












Click it and Unblock the Notifications