Priyank Kharge: ನನ್ನ ನಿರ್ಧಾರ ಒಪ್ಪಿ ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ: ಸಚಿವ ಪ್ರಿಯಾಂಕ್ ಖರ್ಗೆ
Priyank Kharge: ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸದಿರುವ ನನ್ನ ನಿರ್ಧಾರವನ್ನು ಒಪ್ಪಿ ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ನಮ್ಮನ್ನು ಪ್ರೀತಿಸುವವವರು ತೋರುವ ವಾತ್ಸಲ್ಯ, ಅಭಿಮಾನ ಹಾಗೂ ಕಾಳಜಿ ನಾನೆಂದಿಗೂ ಚಿರಋಣಿ. ನಿಮ್ಮೆಲ್ಲರ ಈ ಅದಮ್ಯ ಪ್ರೀತಿಯೇ ನನ್ನ ಕೆಲಸಗಳಿಗೆ ಪ್ರೇರಣೆ ಮತ್ತು ಸ್ಫೂರ್ತಿ. ನನ್ನ ಕೆಲಸದಿಂದ ಯಾರಿಗಾದರೂ ಸಹಾಯವಾದರೆ, ಅದು ನೀವು ನನ್ನ ಮೇಲಿಟ್ಟಿರುವ ನಂಬಿಕೆಯಿಂದ ಮಾತ್ರ ಸಾಧ್ಯವಾದದ್ದು. ರಾಜ್ಯದ್ಯಂತ ಹಲವಾರು ಜನ ಕಾರ್ಯಕರ್ತರು, ಅಭಿಮಾನಿಗಳು ಅಸಂಖ್ಯಾತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಡವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಆರೋಗ್ಯ ಶಿಬಿರಗಳನ್ನು ಆಯೋಜಿಸಿರುವುದು, ಆಸ್ಪತ್ರೆಗಳಲ್ಲಿ ಹಣ್ಣುಗಳನ್ನು ವಿತರಿಸಿರುವುದು, ಅನ್ನದಾಸೋಹ ನಡೆಸಿರುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಿರುವುದು, ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆಗೆ ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.ಮೈಸೂರು, ಮಂಡ್ಯ ಭಾಗದಲ್ಲಿ ಸಂವಿಧಾನ ಓದುವ ಕಾರ್ಯಕ್ರಮ ಕಲಬುರಗಿಯಲ್ಲಿ ಸಾವಿರಾರು ಪೌರಕಾರ್ಮಿಕರಿಗೆ ಸೀರೆ, ಪ್ಯಾಂಟ್ ಹಾಗೂ ಶರ್ಟ್‌ಗಳನ್ನು ವಿತರಣೆ ಮಾಡಲಾಗಿದೆ.
ಅಲ್ಲದೇ ನೂರಾರು ವಿಶೇಷ ಚೇತನರಿಗೆ ಬ್ಲಾಂಕೆಟ್‌ಗಳನ್ನು ವಿತರಣೆ ಮಾಡಿದ್ದಾರೆ. ನೂರಾರು ಪತ್ರಿಕಾ ವಿತರಕರಿಗೆ ಸ್ವೆಟರ್ ಹಂಚಿಕೆ, ಕಣ್ಮಣಿ ಎಂಬ ಕಾರ್ಯಕ್ರಮ ಆಯೋಜಿಸಿ ದೃಷ್ಟಿದೋಷ ಇರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ನಾಡಿನಾದ್ಯಂತ ಹಲವು ಜಿಲ್ಲೆಗಳಲ್ಲಿ ವಿವಿಧ ರೀತಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು, ಪ್ರೀತಿ ತೋರಿಸಿ ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದೀರಿ. ನಿಮ್ಮೆಲ್ಲರ ಈ ಸ್ವಯಂ ಪ್ರೇರಣೆಯ ಕಾರ್ಯಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಅಸಂಖ್ಯಾತ ಜನ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲು ಯತ್ನಿಸಿದ್ದೀರಿ ಹಾಗೂ ಮೆಸೇಜ್ ಕಳಿಸಿ ಶುಭಾಶಯ ಕೋರಿದ್ದೀರಿ, ಆದರೆ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಲು ಸಾಧ್ಯವಾಗದಿರುವುದಕ್ಕೆ ಈ ಮೂಲಕ ಕ್ಷಮೆ ಕೋರುತ್ತೇನೆ.
ನಿಮ್ಮೆಲ್ಲರ ಈ ಅಚಲ ನಂಬಿಕೆಗೆ ಚ್ಯುತಿ ಬಾರದಂತೆ ಪ್ರತಿ ದಿನ, ಪ್ರತಿ ಕ್ಷಣವೂ ಆ ನಂಬಿಕೆಯನ್ನು ಉಳಿಸಿಕೊಂಡು ಹೋಗಲು ನನ್ನ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ. ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ನನ್ನ ತುಂಬುಹೃದಯದ ಕೃತಜ್ಞತೆಗಳು. ನಿಮ್ಮ ಈ ಪ್ರೀತಿಗೆ ನಮ್ಮ ಇಡೀ ಕುಟುಂಬ ಸದಾ ಆಭಾರಿ ಹಾಗೂ ಚಿರಋಣಿಯಾಗಿರಲಿದ್ದೇವೆ ಎಂದಿದ್ದಾರೆ.












Click it and Unblock the Notifications