ಮಂಡ್ಯ ಕ್ಷೇತ್ರಕ್ಕೆ ಅಚ್ಚರಿಯ ಹೆಸರು: ರಜನೀ ಕಾಂಗ್ರೆಸ್ ಅಭ್ಯರ್ಥಿ
ಕರ್ನಾಟಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಒಂದು ಸುದ್ದಿಗೆ ಹತ್ತು ರೆಕ್ಕೆಪುಕ್ಕಗಳು ಹುಟ್ಟಿ ಭಾರೀ ಸುದ್ದಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಡುವೆ, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಗೊಂದಲದ ಗೂಡಾಗಿ ಕೂತಿರುವ ಸಕ್ಕರೆ ನಾಡು ಮಂಡ್ಯ ಅಸೆಂಬ್ಲಿ ಕ್ಷೇತ್ರದಿಂದ ಅಚ್ಚರಿಯ ಹೆಸರೊಂದು ಹೊರಬಿದ್ದಿದೆ.
ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿದ್ದರೂ, ಬೆಂಗಳೂರು ಬಿಟಿಎಸ್ ಬಸ್ ನಲ್ಲಿ ರೈಟ್ ರೈಟ್ ಹೇಳುತ್ತಿದ್ದ ರಜನೀಕಾಂತ್ ಅವರನ್ನು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮಾಡುತ್ತಿದ್ದ ಹಲವು ದಿನಗಳ ಮನವಿ ವರ್ಕೌಟ್ ಆಗಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಮತ್ತು ಕೆಪಿಸಿಸಿ ಪಡಶಾಲೆಯಲ್ಲಿ ಹರಿದಾಡುತ್ತಿದೆ.
ಕರ್ನಾಟಕದ ಹಲವು ರಾಜಕಾರಣಿಗಳು ಮತ್ತು ಚಲನಚಿತ್ರ ಕಲಾವಿದರ ಜೊತೆ ಆಪ್ತರಾಗಿರುವ ರಜನೀಕಾಂತ್, ತಮಿಳುನಾಡಿನಲ್ಲಿ ತಮ್ಮ ಹೊಸ ಪಕ್ಷದ ರೂಪುರೇಷೆಗಳು ಅಂತಿಮಗೊಳ್ಳಲು ಇನ್ನೂ ಸಮಯವಿರುವುದರಿಂದ, ರಾಜಕೀಯದ ಅನುಭವವನ್ನು ಪಡೆಯಲು ಮಂಡ್ಯದಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿರುವ ಕಲಿಯುಗದ ಕರ್ಣ ಅಂಬರೀಶ್ ಕೂಡಾ, ರಜನೀಕಾಂತ್ ಅಭ್ಯರ್ಥಿಯಾದರೆ ಕಣದಿಂದ ಹಿಂದಕ್ಕೆ ಸರಿಯುತ್ತೇನೆ. ಜೊತೆಗೆ, ಅವರು ಗೆಲ್ಲಲು ಸಂಪೂರ್ಣವಾಗಿ ಶ್ರಮವಹಿಸುವುದಾಗಿ ಹೈಕಮಾಂಡಿಗೆ ಮಾತು ನೀಡಿದ್ದಾರೆ ಎನ್ನುವ ಸುದ್ದಿಯಿದೆ.
ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಕ್ಲೈನ್ ವೆಂಕಟೇಶ್, ರಾಜರಾಜೇಶ್ವರಿ ನಗರದ ಸಂಭಾವ್ಯ ಅಭ್ಯರ್ಥಿ ಮುನಿರತ್ನಂ ನಾಯ್ಡು ಮತ್ತು ಪದ್ಮನಾಭ ನಗರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಆರ್ ಅಶೋಕ್ ಅವರ ವಿಶೇಷ ಪರಿಶ್ರಮದಿಂದಾಗಿ ರಜನೀಕಾಂತ್, ರಾಜಕೀಯ ಎಂಟ್ರಿಗೆ ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ಮೋದಿವರ ಜೊತೆ ಉತ್ತಮ ಸಂಬಂಧವನ್ನು ಹೊಂದಿರುವ ರಜನೀಕಾಂತ್, ತಮ್ಮ ನಿರ್ಧಾರಕ್ಕೂ ಮುನ್ನ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಪ್ರಾಭ್ಯಲ್ಯ ಇಲ್ಲದೇ ಇರುವುದರಿಂದ, ನೋ ಪ್ರಾಬ್ಲಂ, ಸ್ಪರ್ಧಿಸಿ ಎಂದು ಮೋದಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ದೂರದ ಚೆನ್ನೈ ನಗರದಿಂದ ವಾಯುಭಾರ ಕುಸಿತದ ವೇಳೆ ಬರುವ ಮೋಡದಂತೆ ಚಲಿಸುತ್ತಾ ಬರುತ್ತಿದೆ ಎನ್ನುವುದು ಪಕ್ಕಾ "ಏಪ್ರಿಲ್ ಫೂಲ್" ಸುದ್ದಿ.












Click it and Unblock the Notifications