Suvarna survey: ರಾಜಧಾನಿ ಆಳಲು ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿ!
ಬೆಂಗಳೂರು, ಮೇ. 04: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಫಲಿತಾಂಶಕ್ಕೂ ಮುನ್ನ ಹಲವು ಸಂಸ್ಥೆಗಳು ಚುನಾವಣಾ ಸಮೀಕ್ಷೆ ನಡೆಸಿವೆ. ಗುರುವಾರ ಎರಡನೇ ಹಂತದ ಸಮೀಕ್ಷೆಯ ಫಲಿತಾಂಶಗಳನ್ನು ಜನ್ ಕೀ ಬಾತ್ - ಸುವರ್ಣ ನ್ಯೂಸ್ ಬಿಡುಗಡೆ ಮಾಡಿದೆ.
ಜನ್ ಕೀ ಬಾತ್ - ಸುವರ್ಣ ನ್ಯೂಸ್ ಮಹಾ ಸಮೀಕ್ಷೆ ಫಲಿತಾಂಶ ಮೇ 4 ರ ಗುರುವಾರ ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಸಿಗಲಿದೆ ಎಂದು ಹೇಳಿದೆ. ಇದರ ಜೊತೆಗೆ ಹಳೇ ಮೈಸೂರು ಭಾಗ, ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ, ಬೆಂಗಳೂರು,.ಮಧ್ಯ ಕರ್ನಾಟಕದ ಪ್ರದೇಶವಾರು ಸಮೀಕ್ಷೆಯನ್ನು ಬಹಿರಂಗ ಪಡಿಸಿದೆ.

ಜನ್ ಕೀ ಬಾತ್ - ಸುವರ್ಣ ನ್ಯೂಸ್ ಸಮೀಕ್ಷೆ ಪ್ರಕಾರ ಬೆಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೇ ನೇರ ಹಣಾಹಣಿ ನಡೆಯಲಿದೆ. ಗ್ರೇಟರ್ ಬೆಂಗಳೂರು ವಿಭಾಗದಲ್ಲಿ ಸುವರ್ಣ ನ್ಯೂಸ್ 32 ಕ್ಷೇತ್ರಗಳನ್ನು ಪಟ್ಟಿ ಮಾಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೇವಲ ಒಂದು ಸ್ಥಾನದ ವ್ಯತ್ಯಾಸವನ್ನು ನೀಡಿದೆ.
ಗ್ರೇಟರ್ ಬೆಂಗಳೂರು ವಿಭಾಗದ 32 ಕ್ಷೇತ್ರಗಳ ಪೈಕಿ ಆಡಳಿತರೂಢ ಬಿಜೆಪಿ ಈ ಬಾರಿ (ಮೇ. 4 ) 15 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಇದೇ ಜನ್‌ಕಿ ಬಾತ್- ಸುವರ್ಣದ ಮೊದಲ ಸಮೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 14ರಂದು ಬಿಟ್ಟಿದ್ದು, ಅಂದು ಕೂಡ 15 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ 11 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.

ಇನ್ನು, ಮೇ. 4 ರಂದು ಬಿಡುಗಡೆ ಮಾಡಿರುವ ಸಮೀಕ್ಷೆ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಈ ಬಾರಿ 14 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಏಪ್ರಿಲ್ 14 ರ ಜನ್‌ಕಿ ಬಾತ್ ಮೊದಲ ಸಮೀಕ್ಷೆಯಲ್ಲಿಯೂ 14 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಕಳೆದ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು.
ಸುವರ್ಣ ಟಿವಿ ಮೇ. 4 ರಂದು ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಜಾತ್ಯಾತೀತ ಜನತಾದಳ 03 ಸ್ಥಾನಗಳನ್ನು ಹೊಂದಲಿದೆ. ಏಪ್ರಿಲ್ 14 ರಂದು 03 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಜೆಡಿಎಸ್ 2018 ರ ಚುನಾವಣೆಯಲ್ಲಿ ಈ ಭಾಗದಲ್ಲಿ 04 ಸ್ಥಾನಗಳನ್ನು ಬಾಚಿಕೊಂಡಿತ್ತು. ಇದರ ಜೊತೆಗೆ ಇತರರು ಒಂದು ಸ್ಥಾನವನ್ನು ಪಡೆಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಟಿವಿ 9 ಹಾಗೂ ಸಿ ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿಯೂ ಬೆಂಗಳೂರು ಭಾಗದ ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 18 ರಿಂದ 22 ಸ್ಥಾನಗಳು, ಬಿಜೆಪಿಗೆ 7 ರಿಂದ 11 ಸ್ಥಾನಗಳು ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ 1 ರಿಂದ 5 ಸ್ಥಾನಗಳು ಸಿಗಬಹುದು ಎಂದು ಹೇಳಿದೆ. ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎಂದಿದೆ.
2ನೇ ಹಂತದ ಜನ್ ಕೀ ಬಾತ್ ಸುವರ್ಣನ್ಯೂಸ್ ಸಮೀಕ್ಷೆಯು ಆಡಳಿತರೂಢ ಬಿಜೆಪಿ ಪಕ್ಷ 100ರಿಂದ 114 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ವಿಪಕ್ಷ ಕಾಂಗ್ರೆಸ್ 86 ರಿಂದ 98 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ 20 ರಿಂದ 26 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಿದ್ದು, ಪಕ್ಷೇತರ ಅಭ್ಯರ್ಥಿಗಳು ಗರಿಷ್ಠ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿದೆ.












Click it and Unblock the Notifications