CBSE ತ್ರಿಭಾಷಾ ನೀತಿ ಕಡ್ಡಾಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್: 2027ಕ್ಕೆ ಮುಂದೂಡಲು ಸಲಹೆ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸದಾಗಿ ಪರಿಚಯಿಸಲಾದ ಕಡ್ಡಾಯ ತ್ರಿಭಾಷಾ ನೀತಿಯ ಜಾರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡುವ ಒಲವು ತೋರಿದೆ.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಇಂತಹ ಪ್ರಮುಖ ನಿಯಮವನ್ನ ಜಾರಿಗೆ ತರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಈ ಬಗ್ಗೆ ತನ್ನ ನಿಲುವನ್ನ ಮರುಪರಿಶೀಲಿಸುವಂತೆ ಸಿಬಿಎಸ್‌ಇಗೆ ಸೂಚನೆ ನೀಡಿದೆ.

ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿರುವುದರಿಂದ, ಮಧ್ಯದಲ್ಲಿ ದಿಢೀರನೆ ಮೂರು ಭಾಷೆಗಳನ್ನ ಕಡ್ಡಾಯಗೊಳಿಸುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೊಸ ನೀತಿಯು ಮಕ್ಕಳು ಮತ್ತು ಪೋಷಕರಿಗೆ ಅನಿರೀಕ್ಷಿತ ಹೊರೆಯಾಗಬಾರದು ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸಿಬಿಎಸ್‌ಇಯ ತ್ರಿಭಾಷಾ ನೀತಿಯನ್ನ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ಸೂಚನೆಗಳನ್ನ ನೀಡಿದೆ.
ಸುಪ್ರೀಂ ಕೋರ್ಟ್ ಸಲಹೆ: ಪ್ರಸ್ತುತ ಬ್ಯಾಚ್‌ಗೆ ಒಂದು ಬಾರಿಯ ವಿನಾಯಿತಿ
ಹೊಸ ನಿಯಮಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಕಾಲಾವಕಾಶದ ಅಗತ್ಯವಿದೆ. ಹೀಗಾಗಿ, ಪ್ರಸ್ತುತ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕಡ್ಡಾಯ ನಿಯಮದಿಂದ ಒಮ್ಮೆಗೆ ಮಾತ್ರ ವಿನಾಯಿತಿ ನೀಡುವುದನ್ನ ಮಂಡಳಿ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸ್ವಯಂ ಪ್ರೇರಣೆಯಿಂದ ತ್ರಿಭಾಷಾ ನೀತಿಯನ್ನ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾತ್ರ ಈ ಕ್ರಮಗಳನ್ನ ಕೈಗೊಳ್ಳಬಹುದು. ಈ ರೀತಿಯ ವಿನಾಯಿತಿಯಿಂದಾಗಿ ತ್ರಿಭಾಷಾ ನೀತಿಯ ಸಿಂಧುತ್ವವನ್ನ ಪ್ರಶ್ನಿಸಿರುವ ಅರ್ಜಿದಾರರ ಕಾನೂನುಬದ್ಧ ವಾದಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
2027ರಿಂದ ಜಾರಿ: ಮುಂದೂಡಿಕೆಗೆ ನ್ಯಾಯಪೀಠದ ಒಲವು
ಶಿಕ್ಷಣ ನೀತಿಯನ್ನ 2020ರಲ್ಲಿ ರೂಪಿಸಲಾಗಿದ್ದರೂ, ಸಿಬಿಎಸ್‌ಇ ಅದನ್ನ 2026ರಲ್ಲಿ ಜಾರಿಗೆ ತರಲು ಮುಂದಾಗಿದೆ. ಇದರ ಬದಲಾಗಿ, 2027ರ ಶೈಕ್ಷಣಿಕ ವರ್ಷದಲ್ಲಿ ಆರನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಈ ಪರಿಷ್ಕೃತ ವ್ಯವಸ್ಥೆಯನ್ನ ಕಡ್ಡಾಯಗೊಳಿಸಬಹುದು.
ಒಂದು ವರ್ಷ ಮುಂದೂಡುವುದರಿಂದ ಎಲ್ಲರಿಗೂ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ ಎಂದು ಪೀಠ ಹೇಳಿದೆ.
ನಿಲುವು ಮರುಪರಿಶೀಲನೆಗೆ ಸೂಚನೆ
ಪ್ರಾಯೋಗಿಕವಾಗಿ ಆಗುವ ತೊಂದರೆಗಳನ್ನ ಗಮನದಲ್ಲಿಟ್ಟುಕೊಂಡು ಮಂಡಳಿ ತನ್ನ ನಿಲುವನ್ನ ಮರುಪರಿಶೀಲಿಸಬೇಕು ಎಂದು ಸಿಬಿಎಸ್‌ಇ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಐಶ್ವರ್ಯ ಭಾಟಿ ಅವರಿಗೆ ನ್ಯಾಯಪೀಠ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ ಭಾಟಿ, ನ್ಯಾಯಾಲಯದ ಸಲಹೆಗಳನ್ನ ಮಂಡಳಿಯ ಗಮನಕ್ಕೆ ತಂದು ಸೂಕ್ತ ನಿರ್ಧಾರದೊಂದಿಗೆ ಮರು ಹಾಜರಾಗುವುದಾಗಿ ತಿಳಿಸಿದ್ದಾರೆ.
ಮಂಡಳಿಯು ಈಗಾಗಲೇ 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯಿಂದ ವಿನಾಯಿತಿ ನೀಡಿದೆ. ನಿಯಮದ ಪ್ರಕಾರ ವಿದ್ಯಾರ್ಥಿಗಳು ಕನಿಷ್ಠ ಎರಡು ಭಾರತೀಯ ಭಾಷೆಗಳನ್ನ ಓದಬೇಕು. ಆದರೆ, ಪ್ರಸ್ತುತ ಎರಡು ವಿದೇಶಿ ಭಾಷೆಗಳು ಮತ್ತು ಒಂದು ಭಾರತೀಯ ಭಾಷೆಯ ಕಲಿಕೆಯನ್ನ ಮುಂದುವರಿಸಲು ಅವಕಾಶವಿದ್ದು, ಮೂರನೇ ಭಾಷೆಯ ಮೌಲ್ಯಮಾಪನವನ್ನು ಬೋರ್ಡ್ ಪರೀಕ್ಷೆಯ ಬದಲು ಶಾಲಾ ಮಟ್ಟದಲ್ಲೇ ನಡೆಸಬಹುದು ಎಂದು ಸಿಬಿಎಸ್‌ಇ ಈ ಮೊದಲೇ ಸ್ಪಷ್ಟಪಡಿಸಿತ್ತು.


Click it and Unblock the Notifications
