ನಾಡಗೀತೆ ರಾಗ ವಿವಾದ: ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ, ಮೈಸೂರು ಅನಂತಸ್ವಾಮಿ ರಾಗವೇ ಅಂತಿಮ

ನವದೆಹಲಿ: ಕರ್ನಾಟಕದ ನಾಡಗೀತೆ ಜಯ ಭಾರತ ಜನನಿಯ ತನುಜಾತೆಯನ್ನ ಹಾಡುವ ರಾಗ ಮತ್ತು ಅದರ ಸಮಯದ ಮಿತಿಯನ್ನ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮಹತ್ವದ ತೀರ್ಪಿನ ಮೂಲಕ ಹಲವು ವರ್ಷಗಳಿಂದ ನಾಡಗೀತೆ ರಾಗದ ಬಗ್ಗೆ ನಡೆಯುತ್ತಿದ್ದ ವಿವಾದಕ್ಕೆ ಈಗ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.

ನಾಡಗೀತೆ ರಾಗ ವಿವಾದದ ಹಿನ್ನೆಲೆ

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನ ದಶಕಗಳ ಹಿಂದೆಯೇ ಕರ್ನಾಟಕದ ನಾಡಗೀತೆಯನ್ನಾಗಿ ಘೋಷಿಸಲಾಗಿದೆ. ಆದರೆ, ಇದನ್ನು ಯಾವ ರಾಗದಲ್ಲಿ ಮತ್ತು ಶೈಲಿಯಲ್ಲಿ ಹಾಡಬೇಕು ಎಂಬ ಬಗ್ಗೆ ಸಾಹಿತ್ಯ ಹಾಗೂ ಸಂಗೀತ ವಲಯದಲ್ಲಿ ದೀರ್ಘಕಾಲದ ಚರ್ಚೆ ನಡೆದಿತ್ತು. ಈ ಗೊಂದಲವನ್ನ ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ 2022ರ ಸೆಪ್ಟೆಂಬರ್ 25ರಂದು ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತ ಆದೇಶವೊಂದನ್ನ ಹೊರಡಿಸಿತ್ತು.

Supreme court

ಈ ಆದೇಶದ ಪ್ರಕಾರ, ಕಡ್ಡಾಯವಾಗಿ ನಾಡಗೀತೆಯನ್ನ ಖ್ಯಾತ ಸಂಗೀತ ನಿರ್ದೇಶಕ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿರುವ ರಾಗದಲ್ಲಿಯೇ ಹಾಡಬೇಕು. ಜೊತೆಗೆ, ಗೀತೆಯನ್ನ ಹಾಡಿ ಮುಗಿಸಲು ಎರಡೂವರೆ ನಿಮಿಷಗಳ ಕಾಲಮಿತಿಯನ್ನ ನಿಗದಿಪಡಿಸಲಾಗಿತ್ತು.

ಸರ್ಕಾರದ ಈ ನಿರ್ಧಾರವನ್ನ ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನ ವಜಾಗೊಳಿಸಿ ಸರ್ಕಾರದ ಆದೇಶವನ್ನ ಸಮರ್ಥಿಸಿತ್ತು.

ಹೈಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಅರ್ಜಿದಾರರು, ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ನಡೆಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿ. ಕಟಾರ್ಕಿ ಅವರು ವಾದ ಮಂಡಿಸಿದ್ದರು. ವಾದವನ್ನು ಆಲಿಸಿದ ಪೀಠವು, ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತು.

ಏಕರೂಪತೆಯ ಅಗತ್ಯವನ್ನ ಒತ್ತಿಹೇಳಿದ ಸುಪ್ರೀಂ ಕೋರ್ಟ್

ವಿಚಾರಣೆಯ ವೇಳೆ ಅತ್ಯಂತ ಮಹತ್ವದ ಅಂಶವನ್ನ ಉಲ್ಲೇಖಿಸಿದ ನ್ಯಾಯಮೂರ್ತಿಗಳ ಪೀಠ, "ನಾಡಗೀತೆಯನ್ನ ಪ್ರಸ್ತುತಪಡಿಸುವಾಗ ಎಲ್ಲ ಕಡೆಯೂ ಒಂದೇ ರೀತಿಯ ರಾಗ ಮತ್ತು ಸಮಾನವಾದ ಕಾಲಮಿತಿ ಇರುವುದು ಅತ್ಯಂತ ಅವಶ್ಯಕ. ಹಾಡುವ ಶೈಲಿಯಲ್ಲಿ ಏಕರೂಪತೆ ಇರಲೇಬೇಕು. ಹೀಗಾಗಿ, ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಸೂಕ್ತ ಕಾರಣಗಳು ಅಥವಾ ಅಗತ್ಯ ಕಂಡುಬರುತ್ತಿಲ್ಲ. ಆದ್ದರಿಂದ ಈ ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದೆ.

ಹೈಕೋರ್ಟ್ ಆದೇಶದಲ್ಲಿ ಏನಿದೆ ?

ಈ ಹಿಂದೆ ಅರ್ಜಿ ವಜಾಗೊಳಿಸುವಾಗ ಹೈಕೋರ್ಟ್, ನಾಡಗೀತೆಯ ರಾಗವನ್ನ ಸಂಗೀತ ಕ್ಷೇತ್ರದ ನುರಿತ ತಜ್ಞರು ಸಂಯೋಜಿಸಿದ್ದಾರೆ. ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕು ಅಥವಾ ಪ್ರಸ್ತುತಪಡಿಸಬೇಕು ಎಂದು ಸೂಚಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂಬ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಈ ಆದೇಶದಿಂದ ಯಾರೊಬ್ಬರ ಹಕ್ಕುಗಳಿಗೂ ಚ್ಯುತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ನಾಡಗೀತೆಯು ರಾಜ್ಯದ ಅಸ್ಮಿತೆ ಮತ್ತು ಗೌರವದ ಸಂಕೇತವಾಗಿದೆ. ಶಾಲಾ ಕಾಲೇಜುಗಳು, ಸರ್ಕಾರಿ ಕಾರ್ಯಕ್ರಮಗಳು ಮತ್ತು ಇತರೆ ಸಾರ್ವಜನಿಕ ಸಮಾರಂಭಗಳಲ್ಲಿ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ಹಾಡಲಾಗುತ್ತದೆ. ಬೇರೆ ಬೇರೆ ರಾಗಗಳಲ್ಲಿ ಹಾಡುವುದರಿಂದ ಗೀತೆಯ ಮೂಲ ಆಶಯ ಮತ್ತು ಏಕತೆಗೆ ಧಕ್ಕೆಯಾಗುತ್ತದೆ ಎಂಬುದು ಹಲವು ಸಾಹಿತಿಗಳ ಕಳಕಳಿಯಾಗಿತ್ತು. ಈ ನಿಟ್ಟಿನಲ್ಲಿ ಸಿ. ಅಶ್ವತ್ಥ್ ಮತ್ತು ಮೈಸೂರು ಅನಂತಸ್ವಾಮಿ ಅವರ ರಾಗಗಳ ನಡುವೆ ಯಾವುದು ಸೂಕ್ತ ಎಂಬ ಚರ್ಚೆ ದಶಕಗಳಿಂದ ನಡೆದುಕೊಂಡು ಬಂದಿತ್ತು. ಅಂತಿಮವಾಗಿ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಸರ್ಕಾರವು ಮೈಸೂರು ಅನಂತಸ್ವಾಮಿ ಅವರ ರಾಗವನ್ನು ಅಂತಿಮಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+