ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ?
ಬೆಂಗಳೂರು, ಮೇ 21 : ಕರ್ನಾಟಕ ಸರ್ಕಾರ ಮೇ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ನಿಯಮದಲ್ಲಿ ಸಡಿಲಿಕೆ ಇದ್ದರೂ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.
Recommended Video
ಸರ್ಕಾರದ ಆದೇಶದಂತೆ ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7ರ ತನಕ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆ, ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
ಭಾನುವಾರದಂದು ಹೆಚ್ಚುವರಿಯಾಗಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಸಹ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆ, ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾನುವಾರದ ಲಾಕ್ ಡೌನ್ ಕುರಿತು ಜನರಲ್ಲಿ ಗೊಂದಲ ಉಂಟಾಗಿದೆ. ಭಾನುವಾರ ಪೂರ್ಣದಿನದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಈ ಹಿನ್ನಲೆಯಲ್ಲಿ ಈಗಾಗಲೇ ನಿಗದಿಪಡಿಸಿರುವ ಮದುವೆ ಸಮಾರಂಭಗಳನ್ನು ನಡೆಸುವ ಕುರಿತು ಗೊಂದಲ ಆಗಿತ್ತು.
ಈಗ ಸರ್ಕಾರ ಹೊಸ ಆದೇಶದ ಮೂಲಕ ಈ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಇದ್ದರೂ ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ನಡೆಸಬಹುದಾಗಿದೆ.
ವಿವಾಹಗಳನ್ನು ನಡೆಸುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಗರಿಷ್ಠ ಅತಿಥಿಗಳ ಸಂಖ್ಯೆಯನ್ನು 50ಕ್ಕೆ ಮಿತಿಗೊಳಿಸಬೇಕು. ಸರಳವಾಗಿ ವಿವಾಹ ನಡೆಸಲು ಅನುಮತಿ ನೀಡಬೇಕು ಎಂದು ಸ್ಪಷ್ಟೀಕರಣ ನೀಡಲಾಗಿದೆ.
ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಆದೇಶವನ್ನು ಕಳುಹಿಸಲಾಗಿದೆ. ಸಂಪೂರ್ಣ ಲಾಕ್ ಡೌನ್ ಇರುವ ಭಾನುವಾರವೂ ಅವಶ್ಯ ಚಟುವಟಿಕೆಗಳಿಗೂ ಅವಕಾಶ ಇರುವುದನ್ನು ಗಮನಿಸಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.












Click it and Unblock the Notifications