ಸಬ್ ರಿಜಿಸ್ಟ್ರಾರ್‌ಗೆ ನೋಂದಾಯಿತ ದಾಖಲೆ ರದ್ದು ಮಾಡುವ ಅಧಿಕಾರವಿಲ್ಲ ಹೈಕೋರ್ಟ್
ಬೆಂಗಳೂರು, ನವೆಂಬರ್ 05; 1908ರ ರಿಜಿಸ್ಟ್ರೇಷನ್ ಕಾಯಿದೆ ಅನ್ವಯ ನೋಂದಾಯಿತ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಅನ್ನು ಕ್ಯಾನ್ಸ್‌ಲೇಷನ್ ಆಫ್ ಜಿಎಪಿ ಹೆಸರಿನಲ್ಲಿ ರದ್ದುಗೊಳಿಸಿ ಮತ್ತೊಂದು ಹೆಸರಿನಲ್ಲಿ ನೋಂದಣಿ ಮಾಡುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಬಾಗಲಕೋಟೆಯ ಮಧುಮತಿ ತಮ್ಮ ಹಾಗೂ ತಮ್ಮ ಪತಿಯ ಹೆಸರಿನಲ್ಲಿ ಜಂಟಿಯಾಗಿ ನೋಂದಾಯಿಸಿದ್ದ ಜಿಪಿಎ ಅನ್ನು ರದ್ದುಗೊಳಿಸಲು ಬಯಸಿದ್ದರು. ಆದರೆ ಅದನ್ನು ನಿರಾಕರಿಸಿ ಬೆಳಗಾವಿಯ ಸಬ್ ರಿಜಿಸ್ಟ್ರಾರ್ ನೀಡಿದ್ದ ಹಿಂಬರಹವನ್ನು ಪ್ರಶ್ನಿಸಿ ಮಧುಮತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಏನಿದು ಪ್ರಕರಣ?; ಅರ್ಜಿದಾರರು ತಮ್ಮ ಹಾಗೂ ತಮ್ಮ ಪತಿ ಹೆಸರಿನಲ್ಲಿ ತಮ್ಮ ವಹಿವಾಟು ನಿಯಂತ್ರಣ, ಆದಾಯ ತೆರಿಗೆ ಪಾವತಿ ಮತ್ತು ಅಡವಿಟ್ಟು ಆಸ್ತಿಗಾಗಿ ತಮ್ಮಲ್ಲಿರುವ ಹಣವನ್ನು ಪಾವತಿಸಲು ಜಂಟಿಯಾಗಿ ಜಿಪಿಎ ನೋಂದಣಿ ಮಾಡಿಸಿಕೊಂಡಿದ್ದರು. ನಂತರ ಅದನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ರದ್ದು ಮಾಡಲಾಗದು ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತು ಆದೇಶ ಪ್ರಕಟಿಸಿರುವ ಹೈಕೋರ್ಟ್, 'ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದ ಕಾರಣ ಸಬ್ ರಿಜಿಸ್ಟ್ರಾರ್‌ಗೆ ನೋಂದಾಯಿತ ದಾಖಲೆ ರದ್ದುಗೊಳಿಸುವ ಅಧಿಕಾರವಿದೆ ಎಂದು ಊಹಿಸಿಕೊಂಡು ಕಾರ್ಯನಿರ್ವಹಿಸುತ್ತಿಲ್ಲ' ಎಂದು ಹೇಳಿದೆ.
'ರಿಜಿಸ್ಟ್ರಾರ್/ ಸಬ್ ರಿಜಿಸ್ಟ್ರಾರ್‌ಗೆ ಅಗತ್ಯ ಪುರಾವೆಗಳೊಂದಿಗೆ ದಾಖಲೆಗಳ ನೋಂದಣಿಯನ್ನು ಮಾಡುವುದಿಲ್ಲವೆಂದು ಹೇಳುವ ಯಾವ ಅಧಿಕಾರವೂ ಇಲ್ಲ. ಆದರೆ 1908ರ ರಿಜಿಸ್ಟ್ರೇಷನ್ ಕಾಯಿದೆ ಅನ್ವಯ ರಿಜಿಸ್ಟ್ರಾರ್‌ಗೆ ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ಯಾವುದೇ ಅಧಿಕಾರವಿಲ್ಲ' ಎಂದು ಆದೇಶಿಸಿದೆ.
ಅಲ್ಲದೆ, ಹಾಗೊಂದು ವೇಳೆ ಡೀಡ್ ರದ್ದು ಮಾಡಬೇಕಾದರೆ ಅದನ್ನೂ ಎರಡೂ ಕಡೆಯಿಂದ ಮಾಡಬೇಕಾಗುತ್ತದೆ. ಒಮ್ಮೆ ನೋಂದಾಯಿತ ದಾಖಲೆ ಜಾರಿಯಾದರೆ, ಅದನ್ನು ರದ್ದುಗೊಳಿಸಲು ಆ ವ್ಯಕ್ತಿ ಬಯಸಿದರೆ ಆಗ ವಿಶೇಷ ಪರಿಹಾರ ಕಾಯಿದೆ ಸೆಕ್ಷನ್ 31 ಅಡಿ ಲಭ್ಯವಿರುವ ಪರಿಹಾರವನ್ನು ಅವರು ಪಡೆದುಕೊಳ್ಳಬೇಕಾಗುತ್ತದೆ. ಅದರೆ ಭಾರತೀಯ ನೋಂದಣಿ ಕಾಯಿದೆ 1908ರಲ್ಲಿ ಅದಕ್ಕೆ ಯಾವುದೇ ಪರಿಹಾರ ಇಲ್ಲ. ಹಾಗಾಗಿ ಉಪ ನೋಂದಣಾಧಿಕಾರಿಗೆ ನೋಂದಾಯಿತ ಜಿಪಿಎ ರದ್ದುಗೊಳಿಸುವ ಅಧಿಕಾರವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
'ಕ್ರಯಪತ್ರ ಅಥವಾ ಡೀಡ್ ಅನ್ನು ರದ್ದುಗೊಳಿಸುವುದು ಅದನ್ನು ವಜಾ ಮಾಡುವುದಕ್ಕೆ ಸಮನಾದುದು. ಕ್ರಯಪತ್ರ ರದ್ದು ಮಾಡುವುದು ಒಪ್ಪಂದವನ್ನು ವಜಾಗೊಳಿಸುವುದು ಅಥವಾ ವಜಾಗೊಳಿಸಿದಂತೆ. ಒಪ್ಪಂದದ ವಿಚಾರಗಳಲ್ಲಿ, ವಜಾಮಾಡುವುದು ಪದವನ್ನು ರದ್ದು ಮಾಡುವುದಕ್ಕೆ ಬಳಸಲಾಗುವುದು. ಆದ್ದರಿಂದ ಒಮ್ಮೆ ವ್ಯಕ್ತಿ ದಾಖಲೆಯನ್ನು ನೋಂದಾಯಿಸಿದರೆ ಮತ್ತು ನಂತರ ಅದನ್ನು ರದ್ದುಗೊಳಿಸಲು ಬಯಸಿದರೆ ಆಗ ಆ ಪ್ರಕರಣವನ್ನು ಭಾರತೀಯ ಒಪ್ಪಂದ ಕಾಯಿದೆ ಸೆಕ್ಷನ್ 62ರಡಿ ನೋಡಬೇಕಾಗುತ್ತದೆ' ಎಂದು ನ್ಯಾಯಾಲಯ ಆದೇಶಿಸಿದೆ.












Click it and Unblock the Notifications