ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ಬೆಂಗಳೂರು, ಆಗಸ್ಟ್ 13 : ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. 2019-20ನೇ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ.
ಉನ್ನತ ಶಿಕ್ಷಣ ಇಲಾಖೆ ಈ ಕುರಿತು ಯೋಜನೆಯನ್ನು ತಯಾರು ಮಾಡಿದೆ. ಬ್ಯಾಂಕಿಂಗ್, ನಾಗರಿಕ ಸೇವಾ ಪರೀಕ್ಷೆ, ರೈಲ್ವೆ ನೇಮಕಾತಿಗಳ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಚಿಂತನೆ ನಡೆಸಲಾಗಿದೆ.
412 ಕಾಲೇಜುಗಳನ್ನು ಓದುತ್ತಿರುವ ಸುಮಾರು 3.04 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಅನ್ವಯ ಲಾಭ ಸಿಗಲಿದೆ. ಪದವಿ ನಂತರ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಹುಡುಕಾಟ ನಡೆಸುವುದನ್ನು ತಪ್ಪಿಸಲು ತರಬೇತಿ ನೀಡಲಾಗುತ್ತದೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬದಿಂದ ಬಂದಿರುತ್ತಾರೆ. ಅವರು ಸಾವಿರಾರು ರೂಪಾಯಿಗಳ ಶುಲ್ಕ ಕಟ್ಟಿ, ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವುದು ಸಾಧ್ಯವಾಗುವುದಿಲ್ಲ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇಲಾಖೆ ವಿವಿಧ ರೀತಿಯ ತರಬೇತಿಯನ್ನು ಆಯೋಜನೆ ಮಾಡಲಿದೆ. ವಿದ್ಯಾರ್ಥಿಗಳು ತಮಗೆ ಅಗತ್ಯವೆನಿಸಿದ ಕೋರ್ಸ್‌ಗಳಿಗೆ ಸೇರಬಹುದಾಗಿದೆ. ಇಂತಹ ತರಬೇತಿ ಆರಂಭಿಸಬೇಕು ಎಂದು ಹಿಂದಿನಿಂದಲೂ ಬೇಡಿಕೆ ಇತ್ತು.
ಪಿಯು ವಿದ್ಯಾರ್ಥಿಗಳಿಗೂ ತರಬೇತಿ : ಶಿಕ್ಷಣ ಇಲಾಖೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ ಸೇರಿದಂತೆ ಸರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ನೀಡಲು ಯೋಜನೆ ರೂಪಿಸಿದೆ.












Click it and Unblock the Notifications