ಎಸ್‌ಎಸ್‌ಎಲ್‌ಸಿ ಆಯ್ತು. ಮುಂದೇನು? ಮುಂದಿನ ಕೋರ್ಸ್ ಆಯ್ಕೆ ಹೇಗಿರಬೇಕು ಇಲ್ಲಿದೆ ಉತ್ತರ
ಎಸ್‌ಎಸ್‌ಎಲ್‌ಸಿ ಆಯ್ತು. ಮುಂದೇನು?. ಇದು ಲಕ್ಷಾಂತರ ವಿದ್ಯಾರ್ಥಿಗಳ ಪ್ರಶ್ನೆ. ರಿಸಲ್ಟ್ ನಂತರ ಮುಂದೇನು ಎನ್ನುವ ಸಹಜ ಗೊಂದಲ ಎಲ್ಲರಲ್ಲೂ ಮೂಡುತ್ತದೆ. ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ಫೇಲ್ ಆದರೆ, ಮಂದೆ ಮಾಡೋದು ಏನು.? ಎಸ್‌ಎಸ್‌ಎಲ್‌ಸಿ ಪಾಸ್ ಆದವರು ಪಿಯುಸಿಗೆ ಹೋಗ್ತಾರೆ. ಅಲ್ಲೂ ಮತ್ತೆ ಯಾವ ವಿಭಾಗ ಆಯ್ಕೆ ಮಾಡಬೇಕು ಎಂಬ ಗೊಂದಲ. ಜೊತೆಗೆ ನನ್ನ ಪರ್ಸಂಟೇಜ್‌ಗೆ ನನ್ನ ಆಯ್ಕೆಯ ವಿಭಾಗ ಸಿಗುತ್ತಾ ಎಂಬ ಆತಂಕ ಕೂಡಾ. ಇದು ಪಾಸ್ ಆದವರ ಪಾಡು. ಇನ್ನು ಫೇಲ್ ಆದವರಂತೂ, ಜೀವನವೇ ಮುಗಿದೇ ಹೋಯಿತು ಅನ್ನುವ ತೀರ್ಮಾನಕ್ಕೂ ಬರುವ ಸಾಧ್ಯತೆಗಳುಂಟು. ಆದರೆ, ಪದೇ ಪದೇ ಹೇಳ್ತೀವಿ ಕೇಳಿ. ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ರೂಪಿಸುವುದಿಲ್ಲ. ಇದು ಸತ್ಯ. ನಿಮ್ಮ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸುವ ಅವಕಾಶಗಳು ನಿಮ್ಮೆದುರು ಸಾಕಷ್ಟಿವೆ. ಹಾಗಾಗಿ, ರಿಸಲ್ಟ್ ಬಂದಾಕ್ಷಣದ ಗೊಂದಲ, ಆತಂಕ ಬೇಡವೇ ಬೇಡ. ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳಿವೆ. ಅದನ್ನು ಸಂಶೋಧಿಸಬೇಕು, ಅಷ್ಟೇ.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದೆ ಯಾವೆಲ್ಲಾ ಕೋರ್ಸ್ ಮಾಡಬಹುದು?
ವಿಜ್ಞಾನ ವಿಭಾಗ: ನಿಮಗೆ ಒಳ್ಳೆ ಅಂಕ ಬಂದಿದ್ದರೆ ಸಾಮಾನ್ಯವಾಗಿ ಎಲ್ಲಾ ಮಕ್ಕಳ ಆಯ್ಕೆ ವಿಜ್ಞಾನ ವಿಭಾಗ. ಹಾಗಂತ ಎಲ್ಲರೂ ವಿಜ್ಞಾನ ವಿಭಾಗ ಬಯಸುತ್ತಾರೆ ಅಂತಲೂ ಅಲ್ಲ. ಒಂದು ವೇಳೆ ನೀವು ಡಾಕ್ಟರ್, ಇಂಜಿನಿಯರ್, ವಿಜ್ಞಾನಿಯಾಗಬೇಕೆಂಬ ಕನಸು ಕಾಣುತ್ತಿದ್ದರೆ, ನಿಮ್ಮ ಮೊದಲ ಆಯ್ಕೆಯೇ ವಿಜ್ಞಾನ ವಿಭಾಗ ಗೊತ್ತಿರಲಿ.

ವಿಜ್ಞಾನ ಆಯ್ಕೆಯಾದ ಕೂಡಲೇ ಗೊಂದಲ ಮುಗಿಯುವುದಿಲ್ಲ. ನಿಮ್ಮ ಆಯ್ಕೆ ಮೆಡಿಕಲ್, ಇಂಜಿನಿಯರಿಂಗ್ ಅಥವಾ ವಿಜ್ಞಾನಿಯಾಗೋದಾ ಅನ್ನೋದು ಬಹುತೇಕ ಇಲ್ಲೇ ನಿರ್ಧಾರವಾಗಿ ಬಿಡುತ್ತದೆ. ಅಂದರೆ, ನಿಮ್ಮ ಆಯ್ಕೆಗನುಗುಣವಾಗಿ ವಿಷಯಗಳ ಕಾಂಬಿನೇಷನ್ ಆಯ್ಕೆ ಮಾಡಬೇಕಾಗುತ್ತದೆ. ಅವುಗಳೆಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) , ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ (ಪಿಸಿಎಂಸಿ) ,ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಇಲೆಕ್ಟ್ರಾನಿಕ್ಸ್ (ಪಿಸಿಎಂಇ) ಇನ್ನು ಕೆಲವು ಕಾಲೇಜುಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಸ್ಟ್ಯಾಟಿಸ್ಟಿಕ್ಸ್ (ಪಿಸಿಎಂಎಸ್) ಆಯ್ಕೆಯನ್ನು ಕೂಡಾ ಒದಗಿಸಲಾಗುತ್ತದೆ.
ನಿಮಗೆ ಮೆಡಿಕಲ್ ಆಯ್ಕೆಯಾದರೆ, ಪಿಸಿಎಂಬಿ ನಿಮ್ಮ ಕಾಂಬಿನೇಷನ್ ಆಗಬಹುದು. ಉಳಿದ ಕಾಂಬಿನೇಷನ್‌ಗಳು ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಿಗೆ ಪಡೆಯಬಹುದು. ಪಿಯು ಕಾಲೇಜುಗಳಿಗೆ ಕೂಡಲೇ ತೆರಳಿ ಅಲ್ಲಿರುವ ವಿಷಯ ಆಯ್ಕೆಯ ಮಾಹಿತಿ ಕೂಡಲೇ ಪಡೆಯಿರಿ. ಗೊತ್ತಿರಲಿ, ವಿಜ್ಞಾನ ಆಯ್ಕೆಗೆ ಸೇರುವ ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶವನ್ನು ಕಾಲೇಜುಗಳು ಗಮನಿಸುತ್ತವೆ. ಇಲ್ಲಿಗೇ ಮುಗಿಯೋದಿಲ್ಲ.
ಮೆಡಿಕಲ್ ಅಥವಾ ಇಂಜನೀಯರಿಂಗ್ ಮುಂದುವರಿಸಬೇಕಾದ್ರೆ, ಸೆಕೆಂಡ್ ಪಿಯುನಲ್ಲಿ ನೀಟ್, ಜೆಇಇ, ಜೆಇಇ ಮೈನ್ಸ್, ಸಿಇಟಿ,ಕೆ-ಸಿಇಟಿ ಮೊದಲಾದ ಪ್ರವೇಶ ಪರೀಕ್ಷೆಗಳನ್ನೂ ಎದುರಿಸಬೇಕಾಗುತ್ತದೆ. ಇದೀಗ ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿರುವುದರಿಂದ, ಪಿಯು ಆರಂಭದಲ್ಲೇ ಈ ಎಲ್ಲಾ ಪ್ರವೇಶ ಪರೀಕ್ಷೆಗಳಿಗೂ ಸಿದ್ಧತೆ ಆರಂಭವಾಗಿರುತ್ತದೆ. ಹಾಗಾಗಿ, ಮೆಡಿಕಲ್ ಆದ್ರೆ, ನೀಟ್, ಐಐಟಿ ಆಯ್ಕೆಯಾಗಿದ್ದರೆ ಜೆಇಇ ಪರೀಕ್ಷೆಗಳಿಗೂ ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ.
ವಾಣಿಜ್ಯ ವಿಭಾಗ: ವಾಣಿಜ್ಯ, ಎಕಾನಾಮಿಕ್ಸ್ ಅಥವಾ ಅಕೌಂಟಿಂಗ್ ಕೋರ್ಸ್‌ನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಕಾಮರ್ಸ್ ಬೆಸ್ಟ್ ಆಯ್ಕೆ. ಈ ಕೋರ್ಸ್ ಮಾಡಿದವರು ಹೂಡಿಕೆ, ಬ್ಯಾಂಕಿಂಗ್, ಫಿನಾನ್ಷಿಯಲ್ ಅಡ್ವೈಸರ್ ಮತ್ತು ಚಾರ್ಟೆಡ್ ಅಕೌಂಟಿಂಗ್ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಬಹುದು.
ಇನ್ನು ಮ್ಯಾನೇಜ್‍ಮೆಂಟ್ ಕೋರ್ಸ್ ಮಾಡಬೇಕು ಎಂದು ಆಸೆ ಇರುವ ವಿದ್ಯಾರ್ಥಿಗಳು ಕೂಡಾ ಕಾಮರ್ಸ್ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಈ ಕ್ಷೇತ್ರಗಳಲ್ಲೂ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಕೆಲಸಗಳೂ ಬೇಗ ಸಿಗುತ್ತವೆ. ಇಲ್ಲೂ ಕೂಡಾ ಹಲವಾರು ವಿಷಯಗಳ ಕಾಂಬಿನೇಷನ್ ಲಭ್ಯವಾಗುತ್ತದೆ. ಅಡ್ಮಿಶನ್ ವೇಲೆ ಫಸ್ಟ್ ಕ್ಲಾಸ್ ರಿಸಲ್ಟ್ ಪರ್ಸಂಟೇಜ್‌ನ್ನು ಕಾಲೇಜುಗಳು ನಿರೀಕ್ಷೆ ಮಾಡುತ್ತವೆ.
ಕಲಾ ವಿಭಾಗ: ಯಾವ ವಿದ್ಯಾರ್ಥಿಗಳು ಭಾಷೆ, ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆಯೋ ಅವರು ಕಲಾ ವಿಭಾಗವನ್ನು ಆರಿಸಿಕೊಳ್ಳಬಹುದು. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡವರಿಗೆ ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ.
ಡಿಪ್ಲೋಮಾ ಇನ್ ಇಂಜಿನಿಯರಿಂಗ್: ಇನ್ನು ಇಂಜಿನಿಯರ್ ಆಗಬೇಕು ಎನ್ನುವ ಆಸೆ ಹೊಂದಿರುವ ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ ನಂತರ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೋರ್ಸ್ ಮಾಡಬಹುದು.
ಇಂಜಿನಿಯರಿಂಗ್‌ನಲ್ಲಿ ನೀಡಲಾಗುವ ಡಿಪ್ಲೋಮ ಕೋರ್ಸ್‌ಗಳ ವಿವರ ಇಲ್ಲಿವೆ: ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ,ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ,ಡಿಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರಿಂಗ್ .
ಇಂಜಿನಿಯರಿಂಗ್ ಡಿಪ್ಲೋಮಾ ಹೊರತುಪಡಿಸಿ ಇರುವ ಕೋರ್ಸ್‌ಗಳೆಂದರೆ:
ಡಿಪ್ಲೋಮಾ ಇನ್ ಫಾರ್ಮಸಿ
ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಮಿಡ್‍ವೈಫರಿ
ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನಿಂಗ್
ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್
ಡಿಪ್ಲೋಮಾ ಇನ್ ಪ್ರಿಂಟಿಂಗ್ ಟೆಕ್ನಾಲಾಜಿ
ಡಿಪ್ಲೋಮಾ ಇನ್ ಪ್ಲ್ಯಾಸ್ಟಿಕ್ ಟೆಕ್ನಾಲಾಜಿ
ಡಿಪ್ಲೋಮಾ ಇನ್ ಲೆದರ್ ಟೆಕ್ನಾಲಾಜಿ
ಡಿಪ್ಲೋಮಾ ಇನ್ ಪೌಲ್ಟ್ರಿ
ಡಿಪ್ಲೋಮಾ ಇನ್ ಮ್ಯೂಸಿಕ್
ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿ
ಡಿಪ್ಲೋಮಾ ಇನ್ ಫುಡ್ ಟೆಕ್ನಾಲಾಜಿ
ಡಿಪ್ಲೋಮಾ ಇನ್ ಟೆಕ್ಸ್‌ಟೈಲ್ ಇಂಜಿನಿಯರಿಂಗ್
ಇಷ್ಟೇ ಅಲ್ಲ. ಎಸ್‌ಎಸ್‌ಎಲ್‌ಸಿ ಮುಗಿದ ತಕ್ಷಣ ಎಲೆಕ್ಟ್ರಿಶಿಯನ್, ಪ್ಲಂಬರ್, ವೆಲ್ಡರ್, ಟರ್ನರ್, ಮೆಕಾನಿಸ್ಟ್ ಮುಂತಾದ ಐಟಿಐ ಕೋರ್ಸ್‌ಗಳಿಗೂ ಸೇರಬಹುದಾಗಿದೆ. ಡಿಪ್ಲೋಮಾ ಇನ್ ಹಾರ್ಡ್‌ವೇರ್, ನೆಟ್‌ವರ್ಕಿಂಗ್, ಪ್ಯಾರಾ ಮೆಡಿಕಲ್ ಮೊದಲಾದ ಜಾಬ್ ಓರಿಯೆಂಟೆಡ್ ಕೋರ್ಸ್‌ಗಳನ್ನೂ ಮಾಡಬಹುದಾಗಿದೆ. ವೆಬ್‌ಡಿಸೈನಿಂಗ್, ಗ್ರಾಫಿಕ್ಸ್, ಆಪ್ ಡವಲಪ್‌ಮೆಂಟ್ ಮೊದಲಾದ ಕ್ಷೇತ್ರಗಳ ಸರ್ಟಿಫಿಕೇಟ್ ಕೋರ್ಸ್ ಕೂಡಾ ಮಾಡಬಹುದಾಗಿದ.
ಗೊತ್ತಿರಲಿ ಜಗತ್ತು ವಿಶಾಲವಾಗಿದೆ. ಅವಕಾಶ ವಿಫುಲವಾಗಿದೆ. ಧೃತಿಗೆಡಬೇಡಿ. ನಿಮ್ಮ ಆಸಕ್ತಿ ಯಾವುದೋ ಅದೇ ನಿಮ್ಮ ಆಯ್ಕೆಯಾಗಿರಲಿ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನಿಮಗೆ ಎಕ್ಸೆಲೆನ್ಸಿ ಸಿಗಲಿ. ಅದೇ ನಿಮ್ಮ ಯಶಸ್ಸಿನ ಸಿದ್ಧಸೂತ್ರ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications