ಶೃಂಗೇರಿ ಮರುಎಣಿಕೆ: ಕಾಂಗ್ರೆಸ್ ಮತಗಳನ್ನು ತಿದ್ದಲಾಗಿದೆ - ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ
ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದಿರುವ ಅಂಚೆ ಮತಗಳನ್ನು ತಿದ್ದುವ ಮೂಲಕ ಮರುಎಣಿಕೆಯಲ್ಲಿ ಅಸಿಂಧುಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮಂಗಳವಾರ ಸಿಎಂ ಗೃಹಕಚೇರಿ 'ಕೃಷ್ಣಾ'ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ ಎಣಿಕೆಯ ಪ್ರಕ್ರಿಯೆಯಲ್ಲಿ ಪ್ರತಿ ಅಂಚೆ ಮತವನ್ನು ಎರಡೂ ಪಕ್ಷಗಳ ಏಜೆಂಟರು ಮತ್ತು ಅಧಿಕಾರಿಗಳಿಗೆ ತೋರಿಸಿ ಅದನ್ನು ಮಾನ್ಯ ಮಾಡಿ ಎಣಿಕೆ ಮಾಡಲಾಗಿತ್ತು ಎಂದು ಹೇಳಿದರು. ಆದರೆ ನಂತರ ಬಿಜೆಪಿ ಅಭ್ಯರ್ಥಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮತಗಳಲ್ಲಿ ತಿದ್ದುಪಡಿ ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದರು.

ನಿರ್ದಿಷ್ಟ ಮತಗಳ ಬಂಡಲ್‌ಗಳನ್ನು ಮರು ಎಣಿಕೆ ಮಾಡಿ ಎಂದು ಪಟ್ಟು ಹಿಡಿದಿದ್ದರು. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಹಾಗೂ ಬಿಜೆಪಿ ಅಭ್ಯರ್ಥಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಅಗತ್ಯವಿದ್ದು, ಚುನಾವಣಾ ಆಯೋಗ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇದು "ದೇಶದಲ್ಲೇ ಅತಿ ದೊಡ್ಡ ಷಡ್ಯಂತ್ರವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಇಂತಹ ಕೆಲಸದಲ್ಲಿ ಭಾಗಿಯಾಗಿದ್ದು, ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜಕೀಯ ಹೇಗೆ ಮಾಡಬೇಕು ಎಂದು ನಮಗೆ ಗೊತ್ತಿದೆ" ಎಂದು ಕಿಡಿಕಾರಿದರು.
ಚುನಾವಣೆಯ ವೇಳೆ ಪ್ರತಿಯೊಂದು ಅಂಚೆ ಮತವನ್ನು ಏಜೆಂಟ್‌ಗಳ ಸಮ್ಮುಖದಲ್ಲಿಯೇ ಪರಿಶೀಲಿಸಿ ಮಾನ್ಯಗೊಳಿಸಲಾಗಿತ್ತು. ಆದರೆ, ಮರುಎಣಿಕೆಯ ಸಂದರ್ಭದಲ್ಲಿ ಅವುಗಳಲ್ಲಿ ತಿದ್ದುಪಡಿ ಮಾಡಿರುವುದು ಗಂಭೀರ ಅನ್ಯಾಯವಾಗಿದೆ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಈ ಅಕ್ರಮ ನಡೆಸಿರುವ ಅನುಮಾನವಿದ್ದು, ಇದು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳನ್ನೇ ಪ್ರಶ್ನಿಸುವ ವಿಷಯವಾಗಿದೆ. ಚುನಾವಣಾ ಆಯೋಗವು ಈ ಬಗ್ಗೆ ನ್ಯಾಯ ಒದಗಿಸಬೇಕು; ನಾವು ಈ ಪ್ರಕರಣದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದೂ ಸಹ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.














Click it and Unblock the Notifications