Special Train: ಭುವನೇಶ್ವರ-ಹುಬ್ಬಳ್ಳಿ-ಬೆಳಗಾವಿಗೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ ಪರಿಶೀಲಿಸಿ
ಹುಬ್ಬಳ್ಳಿ ಸೆಪ್ಟೆಂಬರ್ 13: ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ರೈಲು ಸೇವೆಯನ್ನು ಒದಗಿಸಲು ಪೂರ್ವ ಕರಾವಳಿ ರೈಲ್ವೆ ಇಲಾಖೆ ಹೆಚ್ಚುವರಿ ರೈಲು ಸೇವೆ ವ್ಯವಸ್ಥೆ ಮಾಡಿದೆ. ಹೆಚ್ಚುವರಿ ದಟ್ಟಣೆಗೆ ಅನುಗುಣವಾಗಿ ಭುವನೇಶ್ವರ-ಹುಬ್ಬಳ್ಳಿ-ಬೆಳಗಾವಿ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರಕ್ಕೆ ಪೂರ್ವ ಕರಾವಳಿ ರೈಲ್ವೆ ಸೂಚನೆ ನೀಡಿದೆ.
ಹೆಚ್ಚುವರಿ ದಟ್ಟಣೆಗೆ ಅನುಗುಣವಾಗಿ ರೈಲು ಸಂಖ್ಯೆ 02813/02814 ಭುವನೇಶ್ವರ-ಬೆಳಗಾವಿ-ಭುವನೇಶ್ವರ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರಕ್ಕೆ ಪೂರ್ವ ಕರಾವಳಿ ರೈಲ್ವೆ ಸೂಚನೆ ನೀಡಿದೆ. ರೈಲು ಸಂಖ್ಯೆ 02813 ಭುವನೇಶ್ವರದಿಂದ ಸೆಪ್ಟೆಂಬರ್ 14, 21 ಮತ್ತು 28, 2024 ರಂದು ಪ್ರತಿ ಶನಿವಾರ ಸಂಜೆ 7:15 ಕ್ಕೆ ಹೊರಟು ಸೋಮವಾರ ಬೆಳಗಿನ ಜಾವ 03:00 ಗಂಟೆಗೆ ಬೆಳಗಾವಿ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 02814 ಬೆಳಗಾವಿಯಿಂದ ಪ್ರತಿ ಸೋಮವಾರ ಸೆಪ್ಟೆಂಬರ್ 16, 23 ಮತ್ತು 30, 2024 ರಂದು ಬೆಳಿಗ್ಗೆ 07:30 ಕ್ಕೆ ಹೊರಟು ಮಂಗಳವಾರ ಮಧ್ಯಾಹ್ನ 2:30ಕ್ಕೆ ಭುವನೇಶ್ವರವನ್ನು ತಲುಪುತ್ತದೆ.
ಮಾರ್ಗದಲ್ಲಿ ರೈಲು ಎರಡೂ ದಿಕ್ಕುಗಳಲ್ಲಿ ಖುರ್ದಾ ರಸ್ತೆ, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರಸ್ತೆ, ವಿಜಯನಗರ, ಪೆಂಡುರ್ಟಿ, ದುವ್ವಾಡ, ರಾಜಮಂಡ್ರಿ, ಎಲ್ಲೂರು, ವಿಜಯವಾಡ, ಗುಂಟೂರು, ನಂದ್ಯಾಲ್, ಧೋಣೆ, ಗುಂತಕಲ್, ಬಳ್ಳಾರಿ, ತೊರ್ನಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೋಂಡಾ ನಿಲ್ದಾಣಗಳ ಮೂಲಕ ಸಾಗುತ್ತದೆ.

ವಂದೇ ಭಾರತ್ ರೈಲುಗಳ ಸಮಯ ಪರಿಷ್ಕರಣೆ: ಮಧುರೈ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ವಾರಕ್ಕೆ ಆರು ದಿನ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಕೃಷ್ಣರಾಜಪುರಂ ನಿಲ್ದಾಣದಲ್ಲಿ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
ಸೆಪ್ಟೆಂಬರ್ 15ರಿಂದ 20672 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್-ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 1:55/1:57 ಗಂಟೆಗೆ ಬದಲು 1:43/1:45 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ, ನಿರ್ಗಮಿಸಲಿದೆ.
ರೈಲುಗಳ ಸೇವೆ ವಿಸ್ತರಣೆ: ವಿಜಯಪುರ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377/07378) ರೈಲುಗಳ ಸೇವೆಯನ್ನು ಈಗಿರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಈ ಕೆಳಗಿನಂತೆ ವಿಸ್ತರಿಸಲಾಗುತ್ತಿದೆ.
* 07377 ಸಂಖ್ಯೆಯ ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು ಸೆಪ್ಟೆಂಬರ್ 30ರವರೆಗೆ ಓಡಿಸಲು ಮೊದಲೇ ತಿಳಿಸಲಾಗಿತ್ತು.
* 07378 ಸಂಖ್ಯೆಯ ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 2ರಿಂದ 2025ರ ಜನವರಿ 1ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು ಅಕ್ಟೋಬರ್ 1ರವರೆಗೆ ಓಡಿಸಲು ಮೊದಲೇ ತಿಳಿಸಲಾಗಿತ್ತು.












Click it and Unblock the Notifications