ಮಕ್ಕಳಿಗಾಗಿ ವಿಶೇಷ ಬಜೆಟ್: ಮುಂದಿನ ವರ್ಷದಿಂದ ಜಾರಿ ಸಾಧ್ಯತೆ
ಬೆಂಗಳೂರು, ಡಿಸೆಂಬರ್ 7: ರಾಜ್ಯ ಸರ್ಕಾರವು ಮಕ್ಕಳ ಪ್ರಗತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ಹಣಕಾಸು ವರ್ಷದಿಂದ ಮಕ್ಕಳಿಗಾಗಿ ವಿಶೇಷ ಬಜೆಟ್ ಆರಂಭಿಸಲಿದೆ. ಮಕ್ಕಳಿಗಾಗಿಯೇ ವಿಶೇಷ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಬಜೆಟ್ ವರದಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರವು ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದೆ.
2020-21 ನೇ ಸಾಲಿನಿಂದ ಮಕ್ಕಳಿಗಾಗಿಯೇ ವಿಶೇಷ ಬಜೆಟ್‌ನಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಎಲ್ಲ ಇಲಾಖೆಗಳೂ ಮಕ್ಕಳ ಕೇಂದ್ರಿತ ಯೋಜನೆಗಳು, ಕಾರ್ಯಕ್ರಮ ಕೇಂದ್ರೀಕೃತ ನಿರ್ವಹಣೆ, ಅದಕ್ಕೆ ತಗುಲುವ ವೆಚ್ಚಗಳ ಕುರಿತು ವಿವರಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇಲಾಖೆಗಳಲ್ಲಿ ಮಕ್ಕಳಿಗಾಗಿಯೇ ಇರುವ ಯೋಜನೆಗಳ ಯಥಾವತ್ ಜಾರಿಗೆ ಸರ್ಕಾರ ಆದ್ಯತೆ ನೀಡಲಿದೆ.
ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್ ಜಾರಿಯಾಗಬೇಕು ಎಂದು 2003ರಿಂದಲೂ ವಿವಿಧ ಸಂಘಟನೆಗಳು ಸರ್ಕಾರ ಮತ್ತು ಯೂನಿಸೆಫ್‌ಗೆ ಬೇಡಿಕೆ ಸಲ್ಲಿಸುತ್ತಿದ್ದವು. 2005ರಲ್ಲಿ ಮೊದಲ ಬಾರಿಗೆ ಮಹಿಳಾ ಕೇಂದ್ರಿತ ಬಜೆಟ್‌ಅನ್ನು ಮೊದಲ ಬಾರಿಗೆ ಮಂಡಿಸಲಾಗಿತ್ತು. ಎಲ್ಲಾ ಇಲಾಖೆಗಳಲ್ಲಿಯೂ ಮಕ್ಕಳ ಆಧಾರಿತ ಕಾರ್ಯಕ್ರಮಗಳಿವೆ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಬೇರೆ ಉದ್ದೇಶಗಳಿಗೆ ಹಣ ಬಳಕೆಯಾಗುತ್ತಿದೆ.

ಶೇ 100ರಷ್ಟು ಮಕ್ಕಳ ಕೇಂದ್ರಿತ ಮತ್ತು ಅದಕ್ಕಿಂತ ಕಡಿಮೆ ಇರದಂತೆ ವಿವಿಧ ಇಲಾಖೆಗಳು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಹಾಗೆಯೇ ಬಜೆಟ್ ಒಳಗೆ ಸೇರಿಸಬಹುದಾದಂತಹ ಮಕ್ಕಳ ಕೇಂದ್ರಿತ ಕಾರ್ಯಕ್ರಮಗಳ ಉದ್ದೇಶ ಮತ್ತು ಪರಿಣಾಮಗಳ ಬಗ್ಗೆಯೂ ಸಲಹೆ ನೀಡಬೇಕಿದೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ 40ರಷ್ಟು ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಮಕ್ಕಳ ಕೇಂದ್ರಿಯ ಕಾರ್ಯಕ್ರಮಗಳಿಗೆ ಶೇ 9ರಷ್ಟು ಹಣವನ್ನು ಬಜೆಟ್‌ಗಳಲ್ಲಿ ಮೀಸಲಿಡಬೇಕು ಎಂದು ಈ ಹಿಂದೆ ಚರ್ಚೆ ನಡೆದಿತ್ತು. ಈಗ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದನ್ನು ಶೇ 12ಕ್ಕೆ ಹೆಚ್ಚಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ. ಮಕ್ಕಳ ಬಜೆಟ್ ರೂಪುರೇಷೆ ಸಿದ್ಧಪಡಿಸಲು ಸೂಕ್ತ ವರ್ಕ್‌ಶಾಪ್‌ಗಳನ್ನು ನಡೆಸುವಂತೆ ಬೆಂಗಳೂರಿನ ಹಣಕಾಸು ನೀತಿ ಸಂಸ್ಥೆಯನ್ನು (ಪಿಎಫ್‌ಐ) ಸರ್ಕಾರ ಸಂಪರ್ಕಿಸಿದೆ.
ಮಕ್ಕಳ ಯೋಜನೆಗಳಿಗೆ ಸಾಮರ್ಥ್ಯ ವೃದ್ಧಿ ಮತ್ತು ಸಾರ್ವಜನಿಕ ಹಣಕಾಸು ಮೇಲಿನ ಸಂಶೋಧನೆಗಳ ಕುರಿತಾದ ಯುನಿಸೆಫ್ ಪ್ರಾಯೋಜಿತ ಮಾರ್ಗದರ್ಶಿಗಳನ್ನು ಮಕ್ಕಳ ಬಜೆಟ್ ಒಳಗೊಂಡಿರುತ್ತದೆ. ಈ ಬಜೆಟ್‌ಅನ್ನು ರಾಜ್ಯ ಸರ್ಕಾರ ಮುಂಬರುವ ಹಣಕಾಸು ವರ್ಷದಲ್ಲಿ ಪರಿಚಯಿಸಿದರೆ, ಮಕ್ಕಳ ಬಜೆಟ್ ಜಾರಿ ಮಾಡಿದ ನಾಲ್ಕನೇ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಕೇರಳ, ಅಸ್ಸಾಂ, ಬಿಹಾರ್ ರಾಜ್ಯಗಳಲ್ಲಿ ಈ ಬಜೆಟ್ ಜಾರಿಯಲ್ಲಿದೆ.












Click it and Unblock the Notifications