ಮತಬೇಟೆಗೆ ಪಕ್ಷಗಳ ಚಿತ್ತ ನೆಟ್ಟಿದೆ ಸಾಮಾಜಿಕ ಜಾಲತಾಣಗಳತ್ತ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಮಾರ್ಚ್ 13 : ಚುನಾವಣೆ ಎಂದರೇ ಸಾಕು ಮೊದಲು ನೆನಪಾಗುವುದು ರಾಜಕಾರಣಿಗಳ ಉದ್ದುದ್ದ ಭಾಷಣ. ಮೊದಲೆಲ್ಲ ಮತ ಕೇಳಲು ನಮ್ಮ ರಾಜಕಾರಣಿಗಳು ಮನೆ - ಮನೆಗೆ ತೆರಳಬೇಕಿತ್ತು. ಆದರೆ ಸದ್ಯ ಕಾಲಬದಲಾಗಿದೆ. ಓಟ್ ಕೇಳಲು ಈಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿವೆ ನಮ್ಮ ಪಕ್ಷಗಳು!.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳು ಸಮಾವೇಶ, ಯಾತ್ರೆಗಳ ಭಾಷಣಗಳಲ್ಲಿ ಆರೋಪ ಪ್ರತ್ಯಾರೋಪದ ಮೂಲಕ ಪೌರುಷ ತೋರುವ ಜೊತೆ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಗಳ ಶಕ್ತಿ ಪ್ರದರ್ಶನ ಮಾಡಲು ತಯಾರಾಗಿ ವಾರ್ ರೂಂಗಳನ್ನು ಆರಂಭಿಸಿದ್ದು, ಇದಕ್ಕಾಗಿ ಪ್ರತ್ಯೇಕ ಕಚೇರಿ ಹಾಗೂ ಯುವ ಸಿಬ್ಬಂದಿ ಪಡೆಯನ್ನೇ ನೇಮಿಸಿಕೊಂಡಿದೆ.

ಬಿಜೆಪಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಸಂಘ ಪರಿವಾರ ಕಾರ್ಯಕರ್ತರು

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಬಹಿರಂಗ ಸಭೆಗೆ ಸೀಮಿತವಾಗದೇ, ಸಾಮಾಜಿಕ ಜಾಲತಾಣದ ಮೂಲಕ ಮತದಾರರನ್ನು ಸೆಳೆಯಲು ಕಳದೆ 6 ತಿಂಗಳಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಈ ಸಂಬಂಧ ಈಗಾಗಲೇ ಮೂರು ಪಕ್ಷಗಳು ಪ್ರತ್ಯೇಕ ವಾರ್ ರೂಂ ಆರಂಭಿಸಿ ಐಟಿ ಪಡೆಯನ್ನು ಸಜ್ಜುಗೊಳಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಮುಖವಾಗಿ ಯುವಕರನ್ನು ಸೆಳೆಯಲು ತಂತ್ರಗಳನ್ನು ರೂಪಿಸಿರುವ ಪಕ್ಷಗಳು ಪೈಪೋಟಿಗೆ ಬಿದ್ದು, ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದರೊಂದಿಗೆ ಮೂರು ಪಕ್ಷಗಳು ತಮ್ಮ ಸರಕಾರದ ಅವಧಿಯಲ್ಲಾದ ಸಾಧನೆಯೊಂದಿಗೆ ಇತರೆ ಪಕ್ಷಗಳ ವೈಫಲ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಒದಗಿಸುವ ಮೂಲಕ ಯುವಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ವಾರ್ ರೂಂನಲ್ಲಿ ಕೈ ಮುಂದು

ವಾರ್ ರೂಂನಲ್ಲಿ ಕೈ ಮುಂದು

ಸಾಮಾಜಿಕ ಜಾಲತಾಣಗಳ ಮತ್ತು ವಿಷಯವನ್ನು ಹೆಕ್ಕುವ ಕೆಲಸಕ್ಕೆ ಮೊದಲು ಕೈ ಹಾಕಿದ್ದು ಬಿಜೆಪಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಮಾಜಿಕ ಜಾಲತಾಣಗಳನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಮೂಲಕ ನೇರವಾಗಿ ಜನರನ್ನು ತಲುಪುವಲ್ಲಿ ಯಶ ಕಂಡಿದ್ದರು. ಆದರೆ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗಿಂತ ಮೊದಲು ಕಾಂಗ್ರೆಸ್ ಎಚ್ಚೆತ್ತುಕೊಂಡಿದ್ದು, ಸುಮಾರು ಏಳು ತಿಂಗಳ ಹಿಂದೆಯೇ ಎಲೆಕ್ಷನ್ ವಾರ್ ರೂಮ್ ಸಜ್ಜುಗೊಳಿಸಿ ಬಿಜೆಪಿ ನಾಯಕರ ಪ್ರತಿ ಮಾತು - ಮಾತಿಗೂ ಪ್ರತಿಕ್ರಿಯೆ ನೀಡುತ್ತಾ ಬಂದಿದೆ.

ಸುಮಾರು 100ಕ್ಕೂ ಹೆಚ್ಚು ಜನ ಕಾಂಗ್ರೆಸ್ ವಾರ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರದ ವಿಫಲತೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಪ್ರತಿ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಜನರನ್ನು ತಲುಪುತ್ತಿದ್ದಾರೆ.

ಮುಯ್ಯಿಗೆ ಮುಯ್ಯಿ... ಕಾಂಗ್ರೆಸ್ ಸೇರಿಗೆ ಬಿಜೆಪಿ ಸವ್ವಾಸೇರು!

ಬಿಜೆಪಿಗೆ ಕೇಂದ್ರ ಬಲ

ಬಿಜೆಪಿಗೆ ಕೇಂದ್ರ ಬಲ

ಸಾಮಾಜಿಕ ಜಾಲತಾಣ ಬಳಸಿಕೊಂಡು ಅಧಿಕಾರಕ್ಕೆ ಹೇಗೆ ಬರಬೇಕು ಎಂಬುದನ್ನು ತೋರಿಸಿಕೊಟ್ಟ ಬಿಜೆಪಿ, ರಾಜ್ಯ ಚುನಾವಣಾ ವಿಚಾರದಲ್ಲಿ ಮಾತ್ರ ಆರಂಭದ ದಿನದಲ್ಲಿ ಹಿಂದೆ ಬಿದ್ದಿದ್ದರೂ ನಂತರದ ದಿನದಲ್ಲಿ ಕಾಂಗ್ರೆಸ್ ಗೆ ಪ್ರತಿ ಸ್ಪರ್ಧೆಯಂತೆ ದಿನೇ ದಿನೇ ಅಪ್ಡೇಟ್ ಆಗುತ್ತಿದೆ.

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಸೇರಿದಂತೆ ಯುವಕರ ತಂಡ ಬಿಜೆಪಿಯ ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ವಿರುದ್ಧ ಸಾಲು - ಸಾಲು ಸ್ಟೇಟಸ್ ಹಾಕುತ್ತಿದೆ. ಕಾಂಗ್ರೆಸ್ ನಾಯಕರು ಹೇಳುವ ಪ್ರತಿ ಹೇಳಿಕೆಗಳಿಗೂ ಪ್ರತಿರೋಧ ವ್ಯಕ್ತಪಡಿಸಿ, ಸ್ಟೇಟಸ್ ವಿಡಿಯೋ ಹಾಗೂ ಫೋಟೊಗಳನ್ನು ಹರಿಬಿಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ದಿನಕ್ಕೊಂದು ವಿಡಿಯೋ ಬಿಡುಗಡೆ ಮಾಡುವ ಲೆಕ್ಕಾಚಾರವೂ ಹಾಕಿಕೊಂಡಿದ್ದು ಇದಕ್ಕಾಗಿ ಅನೇಕರನ್ನು ನೇಮಿಸಿಕೊಂಡಿವೆ.

ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸವಾಲ್

ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸವಾಲ್

ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಅಧಿಪತ್ಯ ಸಾಧಿಸಲು ಸಜ್ಜಾಗಿರುವ ಜೆಡಿಎಸ್ 'ನಮ್ಮ ಕುಮಾರಣ್ಣ' ಎನ್ನುವ ಪೇಜ್ ಮೂಲಕ ಜನರನ್ನು ತಲುಪಲು ರಣತಂತ್ರ ರೂಪಿಸುತ್ತಿದೆ. ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಜೆಡಿಎಸ್, ಈ ಬಾರಿ ಚುನಾವಣೆಗೆಂದು ವಾರ್ ರೂಂ ಅನ್ನು ಸಿದ್ಧಪಡಿಸಿದ್ದು, ಕುಮಾರಸ್ವಾಮಿ, ದೇವೇಗೌಡ ಅವರ ಕಾರ್ಯಕ್ರಮಗಳ ಭಾಷಣ ಫೇಸ್ ಬುಕ್ ಲೈವ್ ಮೂಲಕ ಜನರನ್ನು ತಲುಪಿಸಲು ಸಜ್ಜಾಗಿದೆ.

ಇನ್ನು ಜೆಡಿಎಸ್ ನಲ್ಲಿ ಇತರೆ ಪಕ್ಷಗಳಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವ ಬೀರುವಂತಹ ನಾಯಕರು ದಂಡು ಕಡಿಮೆ ಎನಿಸಿದರೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರಿನಲ್ಲಿ ಪೇಜ್ ಗಳನ್ನು ಸಿದ್ಧಪಡಿಸಲಾಗಿದೆ ಇದರೊಂದಿಗೆ ಜೆಡಿಎಸ್ ಭದ್ರಕೋಟೆ ಎನಿಸಿರುವ ಭಾಗದಲ್ಲಿ ಸ್ಥಳೀಯ ನಾಯಕರ ಅಕೌಂಟ್ ನಿಂದ ಅಧಿಕಾರಕ್ಕೆ ಬಂದರೆ ಜೆಡಿಎಸ್ ಜಾರಿಗೆ ತರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಬಳಸಲು ಬಾರದವರಿಗೂ ಅಕೌಂಟ್ ಕ್ರಿಯೇಟ್

ಬಳಸಲು ಬಾರದವರಿಗೂ ಅಕೌಂಟ್ ಕ್ರಿಯೇಟ್

ಸಾಮಾಜಿಕ ಜಾಲತಾಣಗಳು ಹಳ್ಳಿ - ಹಳ್ಳಿಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಗಮನಿಸಿ, ಸ್ಮಾರ್ಟ್ ಫೋನ್ ಬಳಕೆ ಮಾಡಲು ಬಾರದಿರುವ ಕೆಲವು ಹಾಲಿ ಹಾಗೂ ಮಾಜಿ ಶಾಸಕರು ತಮ್ಮ ಬೆಂಬಲಿಗರಿಗೆ ದುಬಾರಿ ಮೊಬೈಲ್ ಕೊಡಿಸಿ ಭರ್ಜರಿ ಡೇಟಾ ಹಾಕಿಸಿ ತಮ್ಮ ಹೆಸರಿನಲ್ಲಿಯೇ ಸಂದೇಶಗಳನ್ನು ರವಾನಿಸಲು ಆರಂಭಿಸಿದ್ದಾರೆ.

ಸೋಜಿಗದ ಸಂಗತಿ ಎಂದರೆ ಇವರೆಲ್ಲ ಫೇಸ್ ಬುಕ್, ಟ್ವಿಟ್ಟರ್ ಅಕೌಂಟ್ ಹೊಂದಿ ಸಂದೇಶಗಳನ್ನು ಕಳುಹಿಸುತ್ತಾರೆ. ಆದರೆ ಇವರಿಗೆ ತಮ್ಮ ಪೇಜ್ ಗಳಿಗೆ ಹೇಗೆ ಹೋಗಬೇಕೆಂಬುದೇ ಗೊತ್ತಿಲ್ಲ ಮತ್ತು ಸ್ವತಃ ತಮ್ಮ ಅಕೌಂಟ್ ನ ಪಾಸ್ ವರ್ಡ್ ಸಹ ಇವರ ಬಳಿ ಇಲ್ಲ. ಈ ಬಗ್ಗೆ ಏನೇ ಕೇಳಿದರೂ ತಮ್ಮ ಅಸಿಸ್ಟೆಂಟ್ ಗಳ ಕಡೆ ಬೆಟ್ಟು ಮಾಡಿ ಅವರ ಬಳಿ ಮಾಹಿತಿ ಪಡೆಯಿರಿ ಎನ್ನುತ್ತಾರೆ. ಅದಾಗ್ಯೂ ಇವರು ಕೂಡ ಒಂದು ಹಂತಕ್ಕೆ ಜನರನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಲುಪುವ ಸಾಹಸ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಅನಿವಾರ್ಯ

ಸಾಮಾಜಿಕ ಜಾಲತಾಣ ಅನಿವಾರ್ಯ

ಸಾಮಾಜಿಕ ಜಾಲತಾಣಗಳು ಅನಿವಾರ್ಯವೆಂದು ಅರಿತ ಅನೇಕ ನಾಯಕರು ನೂತನವಾಗಿ ಫೇಸ್ ಬುಕ್ , ಟ್ವಿಟ್ಟರ್ ಅಕೌಂಟ್ ಗಳನ್ನು ಆರಂಭಿಸುತ್ತಿದ್ದಾರೆ.

ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರು ಕಡ್ಡಾಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಆರಂಭಿಸಿ ಸ್ಥಳೀಯ ಮಟ್ಟದ ಪ್ರಚಾರ ಮಾಡಬೇಕೆಂದು ಸೂಚಿಸಿರುವುದರಿಂದ ನಾಯಕರು ತಮ್ಮ ಆಪ್ತರಿಂದ ಈ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಕಾಲಮಾನ ಬದಲಾದಂತೆ ಮತ ಬೇಟೆಯ ಚಿತ್ತವೂ ಬದಲಾಗುತ್ತಿರುವುದು ಅಚ್ಚರಿಯೇ ಸರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As Karnataaka assebly elections 2018 will be taking place in in few moths. Leaders of Congress, BJP and JDS parties are busy in using social media for campaign.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ