ಗೃಹಲಕ್ಷ್ಮಿ ಯೋಜನೆ; ಸಿದ್ದರಾಮಯ್ಯ ಕೊಟ್ಟ ಎಚ್ಚರಿಕೆ ಏನು?
ಬೆಂಗಳೂರು, ಜುಲೈ 25; ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಯೋಜನೆಯೂ ಒಂದು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಯೋಜನೆಗೆ ಫಲಾನುಭವಿಗಳ ನೋಂದಣಿ ಆರಂಭವಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಚಾಲನೆ ನೀಡಿದ್ದರು. ಇಲಾಖೆಯ ಮಾಹಿತಿಯಂತೆ ಶನಿವಾರದ ತನಕ 22.90 ಲಕ್ಷ ಫಲಾನುಭವಿಗಳ ನೋಂದಣಿಯಾಗಿದೆ. ಭಾನವಾರ ಸರ್ಕಾರ ರಜೆ ಇದ್ದ ಕಾರಣ ನೋಂದಣಿ ಸ್ಥಗಿತವಾಗಿತ್ತು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಗಳನ್ನು ನೀಡುವ ಯೋಜನೆ 'ಗೃಹಲಕ್ಷ್ಮಿ'. ಡಿಬಿಟಿಯ ಮೂಲಕ ನೇರವಾಗಿ ಯಜಮಾನಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.
ಸಿದ್ದರಾಮಯ್ಯ ಟ್ವೀಟ್; ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ. ನೋಂದಣಿಗೆ ಹಣ ಪಡೆಯುವವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಮುಖ್ಯಮಂತ್ರಿಗಳು, 'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ, ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರಲಿದೆ' ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ, ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರಲಿದೆ.
— CM of Karnataka (@CMofKarnataka) July 25, 2023
ಅರ್ಜಿ ಸಲ್ಲಿಕೆಗಾಗಿ ಯಾರಾದರೂ ಹಣ ನೀಡುವಂತೆ ಒತ್ತಾಯಿಸಿದಲ್ಲಿ ಅಥವಾ ಹಣ ಪಡೆದ ಬಗ್ಗೆ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು.…
'ಅರ್ಜಿ ಸಲ್ಲಿಕೆಗಾಗಿ ಯಾರಾದರೂ ಹಣ ನೀಡುವಂತೆ ಒತ್ತಾಯಿಸಿದಲ್ಲಿ ಅಥವಾ ಹಣ ಪಡೆದ ಬಗ್ಗೆ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು' ಎಂದು ಎಚ್ಚರಿಸಿದ್ದಾರೆ.
'ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಬೇಕು, ಸರ್ಕಾರದ ಯೋಜನೆಗಳ ಗರಿಷ್ಠ ಲಾಭ ಫಲಾನುಭವಿಗಳಿಗೆ ಸಿಗಬೇಕು ಎಂಬುದು ನಮ್ಮ ಆಶಯ' ಎಂದು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ; ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು ಜನರು ದೂರು ನೀಡಿದ್ದರು.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಗ್ರಾಮ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದರು.
ಯೋಜನೆಗೆ ಯಾರು ಅರ್ಹರು?; ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು? ಎಂಬುದು ಎಲ್ಲರ ಪ್ರಶ್ನೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಬಿಪಿಎಲ್ , ಎಪಿಎಲ್, ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಗೆ ಫಲಾನುಭವಿಗಳಾಗಿರುತ್ತಾರೆ.
ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟನ್ಸ್ ಸಲ್ಲಿಸುವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಕುಟುಂಬದ ಯಜಮಾನಿಯ ಪಡಿತರ ಚೀಟಿ ಸಂಖ್ಯೆ, ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಯಜಮಾನಿಯ ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಪಾಸ್ ಬುಕ್ ಅಥವಾ ಫಲಾನುಭವಿಯು ಇಚ್ಚಿಸಿರುವ ಪರ್ಯಾಯ ಬ್ಯಾಂಕ್ ಖಾತೆ ವಿವರ ಮಾಹಿತಿ ಅಗತ್ಯವಿದೆ.
ಯೋಜನೆಗೆ ಗ್ರಾಮ ಓನ್ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು, ಕರ್ನಾಟಕ ಓನ್ ಸೇವಾ ಕೇಂದ್ರಗಳಲ್ಲಿ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಸೇವಾಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಫಲಾನುಭವಿಗಳು ಪ್ರಜಾ ಪ್ರತಿನಿಧಿಗಳ ಮೂಲಕ ನೋಂದಾಯಿಸಿಕೊಳ್ಳಬಹುದು.












Click it and Unblock the Notifications