Budget 2024; ಫೆ. 16ರಂದು ಸಿದ್ದರಾಮಯ್ಯ ಬಜೆಟ್‌ ಮಂಡನೆ

ಬೆಂಗಳೂರು, ಜನವರಿ 18: ಕರ್ನಾಟಕದ ಮುಖ್ಯಮಂತ್ರಿ, ಹಣಕಾಸು ಸಚಿವ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸುವ ದಿನಾಂಕ ನಿಗದಿಯಾಗಿದೆ. 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಸರ್ಕಾರ ಬಜೆಟ್‌ನಲ್ಲಿ ಏನು ಘೋಷಣೆ ಮಾಡಲಿದೆ? ಎಂದು ಜನರು ಕಾದು ನೋಡುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ದಿನಾಂಕ ನಿಗದಿ ಮಾಡಲಾಗಿದೆ. ಫೆಬ್ರವರಿ 16ರ ಶುಕ್ರವಾರ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ.

Siddaramaiah To Present Budget 2024-25 On February 16

ಭಾನುವಾರ ಹಾವೇರಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ಮಾರ್ಚ್ ಮೊದಲ ವಾರದೊಳಗೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು" ಎಂದು ಹೇಳಿದ್ದರು. ಗುರುವಾರ ಬಜೆಟ್ ಮಂಡನೆ ದಿನಾಂಕ ಘೋಷಣೆಯಾಗಿದೆ.

ರಾಜ್ಯಪಾಲರ ಭಾಷಣ; ಫೆಬ್ರವರಿ 12ರಿಂದ ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 23ರ ತನಕ ನಡೆಯಲಿದೆ. ಫೆಬ್ರವರಿ 12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗಳು ನಡೆಯಲಿವೆ.

ಫೆಬ್ರವರಿ 16ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಂಡನೆಯಾಗುತ್ತಿರುವ 2ನೇ ಬಜೆಟ್ ಇದಾಗಿದೆ.

2024-25ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಾಣ ಮಾಡಲಿದ್ದಾರೆ. 20213 ರಿಂದ 2018ರ ತನಕ ಮುಖ್ಯಮಂತ್ರಿಯಾಗಿ, ಹಿಂದೆ ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಒಟ್ಟು 14 ಬಾರಿ ಅವರು ಬಜೆಟ್ ಮಂಡಿಸಿದ್ದಾರೆ.

ಈ ಹಿಂದೆ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ 13 ಬಾರಿ ಬಜೆಟ್ ಮಂಡಿಸಿದ್ದರು. ಈಗ ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಎಂಬ ದಾಖಲೆ ಮಾಡಲಿದ್ದಾರೆ.

ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ಕರ್ನಾಟಕ ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಆದರೆ ಹೊಸ ಯೋಜನೆಗಳಿಗೆ ಹಣ ಹೊಂದಿಸುವ ಸವಾಲು ಸಹ ಸರ್ಕಾರದ ಮುಂದಿದೆ.

ಕಾಂಗ್ರೆಸ್ ಸರ್ಕಾರಿ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಂದ ಸುಮಾರು 56 ಸಾವಿರ ಕೋಟಿ ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಈ ಯೋಜನೆಗಳಿಗೆ ಹಣ ಹೊಂದಿಸಬೇಕಿರುವ ಸರ್ಕಾರ ಯಾವ ಹೊಸ ಯೋಜನೆ ಘೋಷಣೆ ಮಾಡಲಿದೆ? ಎಂದು ಕಾದು ನೋಡಬೇಕಿದೆ.

2024-25ನೇ ಸಾಲಿನ ಬಜೆಟ್ ಗಾತ್ರ 3.7 ಲಕ್ಷ ಕೋಟಿ ರೂಪಾಯಿಗಳಾಗುವ ನಿರೀಕ್ಷೆ ಇದೆ. ರಾಜ್ಯದ ಬಜೆಟ್ ಗಾತ್ರಕ್ಕೆ ತಕ್ಕಂತೆ ಆದಾಯ ಸಂಗ್ರಹಣೆಯಾಗುವ ನಿರೀಕ್ಷೆ ಕಡಿಮೆ. ಆದ್ದರಿಂದ ಸಾಲ, ತೆರಿಗೆಗಳ ಏರಿಕೆ ಅನಿವಾರ್ಯವಾಗಿದೆ. ಈಗಾಗಲೇ ಆರ್ಥಿಕ ತಜ್ಞರು ಸಹ ಗ್ಯಾರಂಟಿ ಯೋಜನೆಗಳಿಂದ ಆಗುವ ಹೆಚ್ಚುವರಿ ಹೊರೆ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಸರ್ಕಾರ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಜೊತೆಗೆ ನಡೆಯುತ್ತಿರುವ ಕಾಮಗಾರಿಗಳು, ಕೇಂದ್ರ ಸರ್ಕಾರದ ಜೊತೆ ವೆಚ್ಚ ಹಂಚಿಕೆ ಮಾಡಿಕೊಂಡಿರುವ ಯೋಜನೆಗಳಿಗೆ ಸಹ ಅನುದಾನ ನೀಡಬೇಕಿದೆ. ಇದಕ್ಕಾಗಿ ತೆರಿಗೆಗಳ ಏರಿಕೆ ಮಾಡುವ ಸಾಧ್ಯತೆ ಇದೆ.

ಕಳೆದ ಬುಧವಾರದಿಂದಲೇ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸುತ್ತಿದ್ದಾರೆ. ಕಳೆದ ಬಾರಿ ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಶೇ 13ರಷ್ಟು ಹೆಚ್ಚು ಗಾತ್ರದ ಬಜೆಟ್ ಈ ಬಾರಿ ಮಂಡನೆ ಮಾಡುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದ 2024-25ನೇ ಸಾಲಿನ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ. ಲೋಕಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+