2000 Note Ban: 2016ರಲ್ಲಿ 2000 ನೋಟು ಚಲಾವಣೆಗೆ ತಂದದ್ದು ಯಾಕೆ? ನಿಷೇಧಿಸಿದ್ದು ಯಾಕೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಮೇ 19: ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಆರ್‌ಬಿಐ ಆದೇಶಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ @narendramodi ಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು.
— Siddaramaiah (@siddaramaiah) May 19, 2023
1/2
ಈ ಕುರಿತು ಟ್ವೀಟ್ ಮಾಡಿರುವ ಅವರು, ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು.

ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲ. 2016ರಲ್ಲಿ 2,000 ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದರೆ ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆಯ ಬಗ್ಗೆ ಕಾಂಗ್ರೆಸ್‌ನ ಜೈರಾಮ್ ರಮೇಶ್ ಶುಕ್ರವಾರ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. RBI ನೀಡಿರುವ ಮಾಹಿತಿಯನ್ನ ಹಂಚಿಕೊಂಡಿದ್ದು, ಇದು ವಿಶ್ವಗುರು ವಿಶಿಷ್ಟ ಎಂದು ಕಿಡಿಕಾರಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿದೆ ಮತ್ತು ಚಲಾವಣೆಯಲ್ಲಿರುವ ಅಸ್ತಿತ್ವದಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30 ರೊಳಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.












Click it and Unblock the Notifications