Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆಗೆ ಶಿಫ್ಟ್:‌ ಬಿಗ್‌ ಅಪ್‌ಡೇಟ್‌ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು, ಜೂನ್‌ 08: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣವು ತೀವ್ರ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ರಾಜ್ಯ ರಾಜಕೀಯದಲ್ಲಿ ಇದೀಗ ಕ್ರೀಡಾಂಗಣ ಸ್ಥಳಾಂತರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಗಮನಹರಿಸಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯ ಸರ್ಕಾರ ಪರಿಶೀಲಿಸಲಿದೆ. ಯಾವ ಸರ್ಕಾರದ ಅವಧಿಯಲ್ಲಿಯೂ ಇಂತಹ ಅಹಿತಕರ ಘಟನೆ ನಡೆಯಬಾರದು. ವೈಯಕ್ತಿಕವಾಗಿ ಈ ಘಟನೆ ಸರ್ಕಾರಕ್ಕೆ ನೋವು ತಂದಿದೆ ಎಂದು ಹೇಳಿದರು.

Siddaramaiah Reaction On The Shift of Chinnaswamy Stadium to another location

ಈ ಪ್ರಕರಣದಲ್ಲಿ ಪೊಲೀಸರನ್ನು ಬಲಿಪಶು ಮಾಡಲಾಗಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪೊಲೀಸ್ ಇಲಾಖೆಯ ಐದು ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ. ಗುಪ್ತಚರ ಮುಖ್ಯಸ್ಥರನ್ನು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನು ಬದಲಾಯಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ತಪ್ಪು ಮಾಡಿಲ್ಲ. ಆದರೆ ಘಟನೆ ದು:ಖ ತಂದಿದೆ. ಹಲವಾರು ವರ್ಷಗಳ ಕನಸನ್ನು ಆರ್ ಸಿ ಬಿ ಕನಸು ನನಸಾಗಿಸಿದ್ದು, ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಅನುಮತಿ ನೀಡದಿರುವುದು ಗೃಹ ಸಚಿವರ ಅಸಮರ್ಪಕತೆಯನ್ನು ತೋರಿಸುತ್ತದೆ ಎಂದು ರಾಜ್ಯ ಬಿಜೆಪಿಯವರು ಪತ್ರ ಬರೆದಿದ್ದಾರೆ. ಆದರೆ ಈಗ ಘಟನೆಯ ನಂತರ ಸರ್ಕಾರವನ್ನು ದೂರುತ್ತಿದ್ದಾರೆ. ರಾಜ್ಯ ಬಿಜೆಪಿಯ ಇಂತಹ ಇಬ್ಬದಿತನದ ನಿಲುವು ತೋರುತ್ತದೆ ಎಂದರು.

ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ಹೆಜ್ಜೆ ಇಟ್ಟಿಲ್ಲ. ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿರುವ ಕಾರಣ, ಸರ್ಕಾರಕ್ಕೆ ಮುಜುಗರವಾಗುವ ಪ್ರಶ್ನೆಯಿಲ್ಲ. ಉತ್ತರಪ್ರದೇಶದ ಕುಂಭಮೇಳದ ಸೇತುವೆ ಬಿದ್ದ ಪ್ರಕರಣದಲ್ಲಿ ಜನರು ಮೃತ್ತಪಟ್ಟ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ರಾಜಿನಾಮೆ ನೀಡಿದರೇ? ಬಿಜೆಪಿ ಹಾಗೂ ಜೆಡಿಎಸ್ನವರು ಅಲ್ಲಿನ ಮುಖ್ಯಮಂತ್ರಿಗಳ ರಾಜಿನಾಮೆ ಕೇಳಿದರೇ? ಎಂದು ಮರು ಪ್ರಶ್ನಿಸಿದರು.

ಆರ್ ಸಿ ಬಿ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕಂಡು ಬರುವ ಮಾಹಿತಿ ಆಧರಿಸಿ ಸಂಬಂಧಪಟ್ಟ ಪೊಲೀಸರ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್ ನವರ ಬೇಡಿಕೆಯಂತೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಲಾಗಿದೆ ಎಂದರು. ಅಂತೆಯೇ ಪೊಲೀಸರ ಮೇಲೆಯೂ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ಆಯೋಜನೆಗೆ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದರು.

ವಿಧಾನಸೌಧದ ಭದ್ರತೆಯ ದೃಷ್ಟಿಯಿಂದ ಕಾರ್ಯಕ್ರಮ ನಡೆಸದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಪಿಎಆರ್ ನಿಂದ ಷರತ್ತುಬದ್ದ ಅನುಮತಿ ನೀಡಲಾಗಿತ್ತು. ಷರತ್ತುಗಳನ್ನು ಪಾಲಿಸಿ , ಕಾರ್ಯಕ್ರಮವನ್ನು ಆಯೋಜಿಸುವುದು ಪೊಲೀಸರ ಕರ್ತವ್ಯವಾಗಿತ್ತು. ಈ ಅನುಮತಿ ವಿಧಾನಸೌಧದ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು, ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಘಟನೆ ಸಂಭವಿಸಿದೆ. ಪೊಲೀಸರು ಸಮರ್ಪಕವಾಗಿ ಇಲ್ಲಿ ಭದ್ರತೆ ಒದಗಿಸಬೇಕಿತ್ತು. ಆದರೆ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿರದಿದ್ದ ಕಾರಣ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದ ಸ್ಥಳದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆಯಿಂದ ಸಮಗ್ರ ಮಾಹಿತಿ ಕೊಟ್ಟಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಸರ್ಕಾರಿ ಕಾರ್ಯಕ್ರಮವಾಗಿರಲಿಲ್ಲ ಹಾಗೂ ಇದಕ್ಕೆ ನನಗೆ ಆಹ್ವಾನವೂ ಇರಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಮಧ್ಯಾಹ್ನ 3.50 ಕ್ಕೆ ಗಾಯಗೊಂಡವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ, ನನಗೆ ಸಂಜೆ 5.45 ಕ್ಕೆ ಕ್ರೀಡಾಂಗಣದ ಬಳಿ ಕಾಲ್ತುಳಿತ ಉಂಟಾಗಿ, ಜನರು ಮೃತಪಟ್ಟಿರುವ ಮಾಹಿತಿ ದೊರೆಯಿತು. ಕಾಲ್ತುಳಿತದ ಘಟನೆ ಘಟಿಸಬಾರದಿತ್ತು. ಬಹಳ ಬೇಸರ ತಂದಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+