ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ
ದೆಹಲಿ, ಜುಲೈ 26: ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರೊಂದಿಗೆ ನಡೆದ ಸಭೆಯಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ತಯಾರಾಗಿದೆ ಎಂಬ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯವನ್ನು ನೀಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದಾರೆ.
ಭಾರತ ಸರ್ಕಾರವು ಯೂರಿಯಾ ಮತ್ತಿತರ ರಸಗೊಬ್ಬರಗಳನ್ನು ಎಲ್ಲಾ ರಾಜ್ಯಗಳಿಗೆ ಸರಬರಾಜು ಮಾಡಬೇಕು. ಈ ವರ್ಷ ಭಾರತ ಸರ್ಕಾರವು ಸರಬರಾಜು ಮಾಡಿರುವ ರಸಗೊಬ್ಬರವು ಸಾಕಾಗುತ್ತಿಲ್ಲ. ಏಕೆಂದರೆ ರಾಜ್ಯದಲ್ಲಿ ಮುಂಗಾರು ಅವಧಿಗೂ ಮುನ್ನವೇ ಪ್ರಾರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಈ ವರ್ಷ ಹೆಚ್ಚಾಗಿದೆ. ಜಲಾನಯನ ಪ್ರದೇಶಕ್ಕೆ ನೀರನ್ನು ಈಗಾಗಲೇ ಹಾಯಿಸಲಾಗಿದೆ. ಹಾಗಾಗಿ ರೈತರು ಹೆಚ್ಚು ರಸಗೊಬ್ಬರವನ್ನು ಬಳಸುತ್ತಿದ್ದಾರೆ. ಹಾಗೆಂದು ನಮ್ಮ ಬಳಿ ರಸಗೊಬ್ಬರವಿಲ್ಲ ಎಂದನೇನಲ್ಲ. ಆದರೆ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ. ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ. ಯೂರಿಯಾ ಮತ್ತಿತರ ರಾಸಾಯನಿಕ ರಸಗೊಬ್ಬರ ಲಭ್ಯವಿದ್ದು, ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ ಎಂದು ಜಿ. ಪಿ.ನಡ್ಡಾ ಅವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪವಾಗಿದ್ದು, ನಿರ್ಧಾರವನ್ನು ಪರಿಪರಿಶೀಲಿಸಬೇಕೆಂದು ಜಿ.ಪಿ . ನಡ್ಡಾ ಅವರ ಕಚೇರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದ ಪ್ರಕರಣದ ನ್ಯಾಯಮೂರ್ತಿ ಕುನ್ಹಾ ಅವರ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ನ್ಯಾ.ಮೈಕಲ್ ಕುನ್ಹಾ ಅವರ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಕೆ.ಎಸ್.ಸಿ.ಎ ಹಾಗೂ ಡಿಎನ್ಎ, ಆರ್.ಸಿ.ಬಿ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ. ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ಎಸ್. ಪಿ ಹಾಗೂ ಎಸಿಪಿ ಹಾಗು ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದೆ. ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನ್ಯಾ.ಮೈಕಲ್ ಕುನ್ಹಾ ಅವರ ವರದಿಯನುಸಾರ ಸರ್ಕಾರವು ಶಿಸ್ತಿನ ಕ್ರಮವನ್ನು ಜರುಗಿಸಿದೆ ಎಂದರು.












Click it and Unblock the Notifications