KSRTC Employees: ಸಾರಿಗೆ ನೌಕರರ ಕನಸು ನನಸು: ನಗದು ರಹಿತ ವೈದ್ಯಕೀಯ ಚಿಕಿತ್ಸೆ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಜನವರಿ 06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಇನ್ಮುಂದೆ ದೊರೆಯಲಿದೆ. ಈ ಕುರಿತು ರಾಜ್ಯ ಸರ್ಕಾರ 250ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ನೌಕರರು ಮತ್ತು ಅವರ ಕುಟುಂಬದ ಆರು ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಬಹುದಿನಗಳ ಕನಸು ನನಸಾಗಿದೆ. ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ ಕಾರ್ಡ್)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನಮ್ಮ ಸಾರಿಗೆ ನೌಕರರು ಮತ್ತು ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯದಿಂದ ಕಾಣಬಾರದು. ಚಿಕಿತ್ಸೆ ನೀಡುವಲ್ಲಿ ಉದಾಸೀನ ಮಾಡಕೂಡದು ಎಂದು ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು.

ಸಾರಿಗೆ ನೌಕರರು ತಮ್ಮ ದುಡಿಮೆಯ ಮೂಲಕ ಸಂಸ್ಥೆಯ ಮತ್ತು ನಿಗಮದ ಆದಾಯ ಹೆಚ್ಚಿಸುತ್ತಿದ್ದಾರೆ. ಇವರ ಆರೋಗ್ಯ ಸರ್ಕಾರದ ಮತ್ತು ಸಂಸ್ಥೆ ಹಾಗೂ ನಿಗಮದ ಜವಾಬ್ದಾರಿ ಆಗಿದೆ. ಈ ಕಾರಣಕ್ಕೇ ಖಾಸಗಿ ಆಸ್ಪತ್ರೆಗಳ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.
275 ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆ ಆಗಿದೆ. ಈ ಪ್ರಮಾಣ ಇನ್ನೂ ಹೆಚ್ಚಲಿದೆ. ಸಿಬ್ಬಂದಿ ಕರ್ತವ್ಯನಿರತ ಊರಿನಲ್ಲೇ ಚಿಕಿತ್ಸೆ ಪಡೆಯಬಹುದು. ನೌಕರರ ಕುಟುಂಬದವರು ಅವರು ನೆಲೆಸಿರುವ ಊರಿನಲ್ಲೇ ನಗದು ರಹಿತವಾಗಿ ಚಿಕಿತ್ಸೆ ಪಡೆಯಬಹುದಾದ ಅತ್ಯಂತ ಸುಲಲಿತ ಯೋಜನೆ ಇದಾಗಿದೆ. ನಮ್ಮ ನೌಕರರು ಮತ್ತು ಕುಟುಂಬದವರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಸಮಾಜದಲ್ಲಿ ಲಿಂಗ ತಾರತಮ್ಯ ಇರುವುದರಿಂದ ಮಹಿಳೆಯರ ಆರ್ಥಿಕ ಸಾಮರ್ಥ್ಯ ಹೆಚ್ಚಿಸಲು ಶಕ್ತಿ ಮತ್ತು ಇತರೆ ಯೋಜನೆಗಳ ಮೂಲಕ ಮಹಿಳೆಯರಿಗೆ ಅನುಕೂಲ ಮತ್ತು ಶಕ್ತಿ ಹೆಚ್ಚಿಸಿದ್ದೇವೆ ಎಂದರು. ಶಕ್ತಿ ಯೋಜನೆ ಪರಿಣಾಮ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಭಕ್ತರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳೂ ನನಗೂ ಪತ್ರ ಬರೆದಿದ್ದಾರೆ ಎಂದು ಉಲ್ಲೇಖಿಸಿದರು.
ಆರೋಗ್ಯ ಕಾರ್ಡ್ ಪ್ರಯೋಜನಗಳೇನು?
ಕರ್ನಾಟಕ ಸರ್ಕಾರ ರಾಜ್ಯದ ಖಾಸಗಿ ಮತ್ತು ಆಯುರ್ವೇದಿಕ್ ಸೇರಿದಂತೆ 250ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಯಂತೆ ಕೆಎಸ್ಆರ್ಟಿಸಿ ನೌಕರರು, ಕಾರ್ಮಿಕರು ಈ ಆಸ್ಪತ್ರೆಗಳಲ್ಲಿ ನಗದು ಇಲ್ಲದೆ ಚಿಕಿತ್ಸೆ ಪಡೆಯಬಹುದಾಗಿದೆ. ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಸಾಮಾನ್ಯ ಆಸ್ಪತ್ರೆಯಲ್ಲೂ ಕೆಎಸ್ಆರ್ಟಿಸಿ ನೌಕರರು, ಸಿಬ್ಬಂದಿಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ.
ಆರೋಗ್ಯ ಕಾರ್ಡ್ ಮೂಲಕ ಸಿಬ್ಬಂದಿಯ ಕುಟುಂಬದ ಸದಸ್ಯರು (ಪತಿ, ಪತ್ನಿ, ಮಕ್ಕಳು, ತಂದೆ, ತಾಯಿ) ಈ ಸೌಲಭ್ಯವನ್ನು ಪಡೆಯಬಹುದು. ಒಟ್ಟು ಕುಟುಂಬದ ಆರು ಸದಸ್ಯರಿಗೆ ನಗದು ರಹಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ನೌಕರರು ನಿವೃತ್ತಿಯಾಗುವವರೆಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಕೆಎಸ್ಆರ್ಟಿಸಿ ಆರೋಗ್ಯ ಕಾರ್ಡ್ಗಾಗಿ ನೌಕರರು ಪ್ರತಿ ತಿಂಗಳು 650 ರೂಪಾಯಿ ಪಾವತಿ ಮಾಡಬೇಕು. ಕೆಎಸ್ಆರ್ಟಿಸಿ ನಿಗಮ 600 ರೂಪಾಯಿ ಪಾವತಿ ಮಾಡುತ್ತದೆ. ಇದರಿಂದ ವರ್ಷಕ್ಕೆ ಒಟ್ಟು 46 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ.












Click it and Unblock the Notifications