Siddaramaiah: ಅರಸು ದಾಖಲೆ ಬ್ರೇಕ್ ಮಾಡಿದ ಬೆನ್ನಲ್ಲೇ ಅಚ್ಚರಿಯ ಹೇಳಿಕೆ ಕೊಟ್ಟ ಸಿದ್ದರಾಮಯ್ಯ
ಮೈಸೂರು: ಸಿದ್ದರಾಮಯ್ಯ 40 ವರ್ಷದ ರಾಜಕೀಯ ಜೀವನದಲ್ಲಿ ಬೇಕಾದಷ್ಟು ಚಾಲೆಂಜ್ ಎದುರಿಸಿದ್ದಾರೆ. ಮೈಸೂರಿನ ತಾಲೂಕು ಬೋರ್ಡ್ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನವನ್ನ ಅಲಂಕರಿಸುವವರೆಗೂ ಸಿದ್ದರಾಮಯ್ಯ ಅವರು ಹಲವು ಸವಾಲುಗಳನ್ನ ಎದುರಿಸಿ, ಅರಸು ದಾಖಲೆಯನ್ನ ಬ್ರೇಕ್ ಮಾಡಿದ್ದು, ಇದೀಗ ಪೂರ್ಣಾವಧಿ ಸಿಎಂ ಆಗಿ ಇನ್ನೊಂದು ದಾಖಲೆ ನಿರ್ಮಿಸೋದಕ್ಕೆ ಸಜ್ಜಾಗಿದ್ದಾರೆ.
ರಾಜ್ಯದಲ್ಲಿ ಎರಡನೇ ಬಾರಿ ಸಿಎಂ ಕುರ್ಚಿ ಏರಿ ರಾಜ್ಯವನ್ನ ಮುನ್ನಡೆಸುತ್ತಿರೋ ಸಿದ್ದರಾಮಯ್ಯಗೆ ಅವರಿಗೆ ಸದ್ಯ ನಾಯಕತ್ವ ಬದಲಾವಣೆ ವಿಚಾರ ದೊಡ್ಡ ತಲೆಬಿಸಿ ಆಗಿದೆ. ಸರ್ಕಾರ ರಚನೆಯ ಸಂದರ್ಭದಲ್ಲೇ ಪವರ್ ಶೇರಿಂಗ್ ಒಪ್ಪಂದ ಮಾತು ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಇದರ ನಡುವೆ ಡಿ ಕೆ ಶಿವಕುಮಾರ್ ಅವರು ಸಿಎಂ ಕುರ್ಚಿಗಾಗಿ ಪದೇ ಪದೇ ಹೈಕಮಾಂಡ್ ನಾಯಕರನ್ನ ಸಂಪರ್ಕಿಸುತ್ತಿದ್ದು, ಸದ್ಯ ಸಿಎಂ ಕುರ್ಚಿ ಕಾದಾಟದ ಕಿಚ್ಚು ಬೂದಿ ಮುಚ್ಚಿದ ಕೆಂಡದಂತಾಗಿದೆ.

ಇನ್ನೂ ಅರಸು ದಾಖಲೆ ಬ್ರೇಕ್ ಮಾಡಿದ ಸಿದ್ದರಾಮಯ್ಯ ಅವರು ಇಂದು ಪೂರ್ಣಾವಧಿ ಸಿಎಂ ಆಗಿ ಮುಂದುವರೆಯುವುದಾಗಿ ಮತ್ತೆ ಬಹಿರಂಗ ಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅವಧಿಯನ್ನು ಪರಿಪೂರ್ಣ ಮಾಡುವ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಬೇಕಿದೆ. ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ ಎಂದರು. ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿಗಳ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿರುವ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ಈ ಬಗ್ಗೆ ತಿಳಿದಿಲ್ಲ ಎಂದ ಮುಖ್ಯಮಂತ್ರಿಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ರಾಗಿ ಮುದ್ದೆ ತಿನ್ನುತ್ತಿದ್ದೆ. ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಪ್ರಚಾರ ಸಿಗುತ್ತಿದೆ ಎಂದರು.
ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ ಎಂದ ಮುಖ್ಯಮಂತ್ರಿಗಳು ಜನರ ಕೆಲಸ ಮಾಡುವುದು ಖುಷಿಯ ಸಂಗತಿ ಎಂದರು. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಕೆಲಸ ಮಾಡಿಕೊಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಶಾಸಕನಾದೆ, ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆದೆ. ಅವಕಾಶಗಳು ಸಿಕ್ಕಿದ್ದರಿಂದ ಇವೆಲ್ಲ ಆಗಲು ಸಾಧ್ಯವಾಯಿತು ಎಂದರು.
ದೇವರಾಜ ಅರಸು ಹಾಗೂ ನಾನು ಇಬ್ಬರೂ ಮೈಸೂರಿನವರೇ ಆಗಿದ್ದು, ಇಬ್ಬರೂ ದೀರ್ಘಾವಧಿಯ ಮುಖ್ಯಮಂತ್ರಿಗಳಾಗಿದ್ದು ಕಾಲಘಟ್ಟ ಬೇರೆ ಬೇರೆ. 1972ರಿಂದ 80ವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡು ಅವಧಿಗೆ ಆಗಿದ್ದೇನೆ ಎಂದರು. ಇನ್ನೂ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮಗಳ ಬಗ್ಗೆ ಕಾದು ನೋಡಿ ಎಂದರು.
ನಿನ್ನೆ ವೇಣುಗೋಪಾಲ್ ಅವರೊಂದಿಗೆ ನಡೆದ ಮಾತುಕತೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ವಯನಾಡಿನಿಂದ ಬೆಂಗಳೂರು ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸೌಹಾರ್ದಯುತವಾಗಿ ಮೈಸೂರಿನಲ್ಲಿ ಭೇಟಿ ಮಾಡಲಾಯಿತು ಎಂದರು. ಅಲ್ಲದೇ ಸಂಪುಟ ಪುನರ್ ರಚನೆಯ ಬಗ್ಗೆ ದೆಹಲಿಯಿಂದ ಕರೆ ಬಂದಾಗ ಮಾತನಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications