ಮಹತ್ವದ ನಿರ್ಣಯ ಕೈಗೊಂಡ ರಾಜ್ಯ ಸಚಿವ ಸಂಪುಟ ಸಭೆ: ಬಿಜೆಪಿ, ಜೆಡಿಎಸ್ ನಾಯಕರಿಗೆ ಸಂಕಷ್ಟ
ಬೆಂಗಳೂರು, ಆಗಸ್ಟ್ 23: ಮುಡಾ ಹಗರಣ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ
ಸಿದ್ದರಾಮಯ್ಯ ಅವರ ವಿಚಾರದಲ್ಲಿ ತೋರಿದ ಆಸಕ್ತಿಯನ್ನು ಇತರೆ ವಿರುದ್ಧ ಬಾಕಿ ಇರುವ ಪ್ರಾಸಿಕ್ಯೂಷನ್ಗೆ ಅನುಮತಿ ನೀಡದ ವಿಚಾರಕ್ಕೆ ಸಿದ್ದರಾಮಯ್ಯ ಸರ್ಕಾರ, ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡುವ ನಿರ್ಣಯ ಕೈಗೊಂಡಿದೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಂಕಷ್ಟು ಎದುರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಇಂದಿನ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮುಂದೆ ಬಾಕಿ ಇರುವ ಪ್ರಾಸಿಕ್ಯೂಷನ್ ಮನವಿ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.ಬಾಕಿ ಇರುವ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ, ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣ ಬಗ್ಗೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರಿಗೆ ಸಲಹೆ ನೀಡಲು ಮುಂದಾಗಿದೆ.
ಇನ್ನು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಮಾತನಾಡಿ, ಸಿಎಂ ನೇತೃತ್ವದ ಸಭೆಯಲ್ಲಿ 35 ವಿಷಯಗಳ ಕುರಿತು ಚರ್ಚಿಸಿದ್ದೇವೆ. ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್ಗೆ ಇರುವ ಹಲವು ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನು ಕೆಲವು ಪ್ರಕರಣ ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಹೋಗಿದೆ. ಕೆಲವು ತನಿಖಾ ಸಂಸ್ಥೆಗಳ ವರದಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ. ಅನೇಕ ಅನುಮೋದನೆ ಅರ್ಜಿಗಳು ರಾಜ್ಯಪಾಲರ ಸಮಕ್ಷಮದಲ್ಲಿ ಬಾಕಿ ಇವೆ. ಈ ಅರ್ಜಿಗಳಲ್ಲಿ ಕೆಲವು ಚಾರ್ಜ್ಶೀಟ್ ಸಲ್ಲಿಕೆಗೆ ಒಪ್ಪಿಗೆ ಬಾಕಿ ಇವೆ. ಭ್ರಷ್ಟಾಚಾರ ತಡೆಕಾಯ್ದೆ ಸೆಕ್ಷನ್ 19ರಡಿ ಅನುಮೋದನೆಗೆ ಬಾಕಿ ಇದೆ. 17ಎ ಅಡಿಯಲ್ಲೂ ರಾಜ್ಯಪಾಲರ ಪೂರ್ವಾನುಮತಿಗೆ ಬಾಕಿ ಇದೆ. ಆ ಎಲ್ಲಾ ಪ್ರಕರಣಗಳ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ 163ರ ಅನ್ವಯ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಣಯಿಸಿದ ಎಂದು ತಿಳಿಸಿದರು.
ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ʻಹೊಂಬೆಳಕುʼ ಯೋಜನೆಯಡಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲು, ರೂ.25 ಕೋಟಿ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ 250 ಮೀಟರ್ ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು ತಾಂತ್ರಿಕ ಅನುಮೋದನೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಧನ ವೆಚ್ಚ ಉಳಿತಾಯವಾಗುವ ಮೊತ್ತದಲ್ಲಿ, ಸಾಂಪ್ರದಾಯಿಕ ವಿದ್ಯುತ್ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್.ಇ.ಡಿ ಬೀದಿ ದೀಪಗಳನ್ನು ಇ.ಎಂ.ಐ/ವಾರ್ಷಿಕ ಪಾವತಿ ಯೋಜನೆಯಡಿ ಮುಂದಿನ 7 ವರ್ಷಗಳ ಅವಧಿಗೆ ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೆಬ್ಬಾಳ ಮೇಲು ಸೇತುವೆ ಎಸ್ಟೀಮ್ ಮಾಲ್ ಹತ್ತಿರದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಮೇಲ್ಸೇತುವೆ ತನಕ 12690 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭೂಗತ ವಾಹನ ಸುರಂಗ ಮಾರ್ಗವನ್ನು ಟ್ವಿನ್ ಟ್ಯೂಬ್ ಮಾದರಿಯಲ್ಲಿ ನಿರ್ಮಿಸಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 52 ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಇದಕ್ಕೆ ತಗಲುವ ರೂ.20 ಕೋಟಿ ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಟಿಡಿಆರ್ ಯೋಜನೆಯಡಿ ಸ್ವಾಧೀನಪಡಿಸುವ ಪ್ರಕ್ರಿಯೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಸೂಚನೆಯನ್ವಯ ಸಾರ್ವಜನಿಕರಿಗೆ ಭೂಪರಿಹಾರ ನೀಡಲು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ.
ಆಯವ್ಯಯದಲ್ಲಿ ಘೋಷಿಸಿರುವಂತೆ 85ಕೋಟಿ ರೂ. ಅನುದಾನದಲ್ಲಿ 592ಅಂಗನವಾಡಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಸಂಸ್ಥೆಯ ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ದಿನಾಂಕ 01-04-1998 ರಿಂದ 30-09-2005ರ ವರೆಗಿನ ವೇತನ ಬಾಕಿ, ಬಡ್ಡಿ ಇತ್ಯಾದಿಗಳನ್ನು ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸು ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ರಾಜ್ಯದಲ್ಲಿ 147.87 ಕೋಟಿ ರೂ. ಮೊತ್ತದಲ್ಲಿ ಅನುಷ್ಢಾನಗೊಳಿಸಲು ಅನುಮೋದನೆ ನೀಡಲಾಗಿದೆ. ಬಳ್ಳಾರಿ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2ಸಾವಿರ ಎಕ್ರೆ ಜಮೀನನ್ನು ಪ್ರತಿ ಎಕರೆಗೆ 1.22 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಹಾಗೂ ಸಂಡೂರು ತಾಲೂಕಿನ ತೋರಗಣಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕ್ರೆ ಜಮೀನನ್ನು ಪ್ರತಿ ಎಕರೆಗೆ ರೂ. 1.50 ಲಕ್ಷ ಅಂತಿಮ ಬೆಲೆ ನಿಗದಿಪಡಿಸಿ ಜೆ.ಎಸ್.ಡಬ್ಲ್ಯೂ ಸ್ಟೀಲ್ ಪರವಾಗಿ ನೀಡಲು ನಿರ್ಧರಿಸಲಾಗಿದೆ.
ಕೆ.ಎ.ಎಸ್ ಅಧಿಕಾರಿ ರಾಜಮ್ಮ ಎ. ಚೌಡರೆಡ್ಡಿ ಅವರ ವಿರುದ್ಧ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರ ಶಿಫಾರಸ್ಸಿನಂತೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಅನುಮೋದನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಹಾಗೂ ಆರೋಗ್ಯ ಇಲಾಖೆಯ ಇತರ ಎಲ್ಲಾ ಆರೋಗ್ಯ ಸಂಬಂಧಿತ ಡಿಜಿಟಲ್ ಉಪಕ್ರಮಗಳ ಅನುಷ್ಠಾನಕ್ಕಾಗಿ ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿ ಸ್ಥಾಪಿಸಿ ನೋಂದಣಿ ಮಾಡಲು ನಿರ್ಧರಿಸಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಲಪರ್ವಿ ಗ್ರಾಮದ ಹತ್ತಿರ ತುಂಗಾಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ರೂ.397.50 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕಿಸುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯನ್ನು ರೂ.28ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.












Click it and Unblock the Notifications