ಸಿಎಂ ಕುರ್ಚಿ ಫೈಟ್ ಕ್ಲೈಮ್ಯಾಕ್ಸ್: ನಾಳೆ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬ್ರೇಕ್‌ಫಾಸ್ಟ್ ಮೀಟಿಂಗ್
ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮುಖ್ಯಮಂತ್ರಿ ಬದಲಾವಣೆ ವದಂತಿಗಳ ಬೆನ್ನಲ್ಲೇ, ಗುರುವಾರ (ಮೇ 28) ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಮಹತ್ವದ ಉಪಹಾರ ಕೂಟ (Breakfast Meeting) ಆಯೋಜನೆಗೊಂಡಿದೆ. ಈ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಆಹ್ವಾನ ನೀಡಿದ್ದು, ಇಬ್ಬರು ನಾಯಕರ ಈ ಭೇಟಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ದೆಹಲಿ ಸಭೆಯ ಬೆನ್ನಲ್ಲೇ ಕಾವೇರಿಯಲ್ಲಿ ಚರ್ಚೆ
ದೆಹಲಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಸುಮಾರು 6 ಗಂಟೆಗಳ ಕಾಲ ಸುದೀರ್ಘ ಸಭೆ ನಡೆದಿತ್ತು. ಈ ಹೈಕಮಾಂಡ್ ಸಭೆ ಮುಗಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಈ ಉಪಹಾರ ಕೂಟ ನಿಗದಿಯಾಗಿದೆ. ಡಿ.ಕೆ.ಶಿವಕುಮಾರ್ ಅವರು ನಾಳೆ ಮುಂಜಾನೆ 5:45ಕ್ಕೆ ದೆಹಲಿಯಿಂದ ವಿಮಾನದ ಮೂಲಕ ಹೊರಟು, 8:30ಕ್ಕೆ ಬೆಂಗಳೂರು ತಲುಪಲಿದ್ದು, ನೇರವಾಗಿ 9 ಗಂಟೆಗೆ ಸಿಎಂ ನಿವಾಸ 'ಕಾವೇರಿ'ಗೆ ಆಗಮಿಸಲಿದ್ದಾರೆ.

ಚರ್ಚೆಯಾಗುವುದೇನು?
ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಹಾಗೂ ರಾಜ್ಯಸಭಾ ಸ್ಥಾನ ಸ್ವೀಕರಿಸಿ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಮೇ 28ರಂದೇ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರ ಪ್ರಕಟಿಸಬಹುದು ಎಂಬ ವದಂತಿಗಳಿರುವುದರಿಂದ ಈ ಸಭೆಯು ಅತ್ಯಂತ ನಿರ್ಣಾಯಕ ಎನ್ನಲಾಗಿದೆ.
"ದೆಹಲಿಯಲ್ಲಿ ಕೇವಲ ಮುಂಬರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಟಿಕೆಟ್ ಹಂಚಿಕೆ ಬಗ್ಗೆ ಮಾತ್ರ ಚರ್ಚೆಯಾಗಿದೆ, ಸಿಎಂ ಬದಲಾವಣೆ ಕೇವಲ ಮಾಧ್ಯಮಗಳ ಊಹೆ" ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಅಧಿಕೃತವಾಗಿ ಹೇಳಿದ್ದರೂ ಆಂತರಿಕವಾಗಿ ನಾಯಕತ್ವ ಹಸ್ತಾಂತರದ ಸೂತ್ರಗಳೇ ಇಲ್ಲಿ ಪ್ರಮುಖ ಅಜೆಂಡಾ ಎನ್ನಲಾಗಿದೆ. ಕಳೆದ ಆರು ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಒಂದು ವೇಳೆ ಅವರು ಸಿಎಂ ಆದರೆ, ಹೊಸ ಅಧ್ಯಕ್ಷರ ನೇಮಕ ಹಾಗೂ ಸಿದ್ದರಾಮಯ್ಯ ಬಣದ ಸಚಿವರಿಗೆ ಸಂಪುಟದಲ್ಲಿ ನೀಡಬೇಕಾದ ಸ್ಥಾನಮಾನಗಳ ಕುರಿತು ಇಬ್ಬರು ನಾಯಕರು ಒಮ್ಮತಕ್ಕೆ ಬರಲು ಈ ಸಭೆ ವೇದಿಕೆಯಾಗಲಿದೆ.
ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು?
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ತಮ್ಮ ನಿಷ್ಠಾವಂತ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ್ದು, ತಮಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಹಿಂದ ವರ್ಗದ ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಒಪ್ಪಿಸಿಯೇ ಅಧಿಕಾರ ಹಸ್ತಾಂತರ ಮಾಡಬೇಕಿರುವುದರಿಂದ, ಹೈಕಮಾಂಡ್ ಕರ್ನಾಟಕದಲ್ಲಿ ಬಿಕ್ಕಟ್ಟು ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸುತ್ತಿದೆ. ಹೀಗಾಗಿ ನಾಳೆ ಬೆಳಗ್ಗೆ 9 ಗಂಟೆಗೆ 'ಕಾವೇರಿ' ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಮುಖಾಮುಖಿ ಕುಳಿತು ನಡೆಸುವ ಈ ಉಪಹಾರ ಸಭೆಯು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ.
ದೆಹಲಿ ಚರ್ಚೆ ಬಗ್ಗೆ ನನಗೇನೂ ಗೊತ್ತಿಲ್ಲ: ಪರಮೇಶ್ವರ್
ನಿನ್ನೆ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರ ನಡುವೆ ಆಂತರಿಕವಾಗಿ ಏನು ಚರ್ಚೆಯಾಗಿದೆ ಎಂಬುದು ತಮಗೆ ಇನ್ನು ತಿಳಿದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಇಂದು ಬೆಂಗಳೂರಿಗೆ ಬರುತ್ತಿದ್ದಾರೆ, ಅವರೇ ಎಲ್ಲ ಗೊಂದಲಗಳನ್ನ ಬಗೆಹರಿಸಲಿದ್ದಾರೆ. ಆಂತರಿಕ ಚರ್ಚೆಗಳ ಬಗ್ಗೆ ನಮಗೆ ಗೊತ್ತಿಲ್ಲ, ಕೆ.ಸಿ.ವೇಣುಗೋಪಾಲ್ ಅವರು ಏನು ಹೇಳಿದ್ದಾರೋ ಅಷ್ಟೇ ನಮಗೆ ಗೊತ್ತು. ನಾನು ಇವತ್ತು ಮಧ್ಯಾಹ್ನ ಸಿಎಂ ಅವರನ್ನು ಭೇಟಿಯಾಗುತ್ತಿದ್ದೇನೆ, ಹಾಗೇ ಸಿಎಂ ನಾಳೆ ಬೆಳಗ್ಗೆ ಉಪಹಾರ ಕೂಟವನ್ನೂ ಕರೆದಿದ್ದಾರೆ" ಎಂದಿದ್ದಾರೆ.
ಕೆ.ಸಿ.ವೇಣುಗೋಪಾಲ್ ಅವರು "ಚುನಾವಣೆಗಳ ಬಗ್ಗೆ ಮಾತ್ರ ಚರ್ಚೆಯಾಗಿದೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರೂ, ಆಂತರಿಕ ವಲಯದಲ್ಲಿ ಏನೋ ದೊಡ್ಡ ಮಟ್ಟದ ರಾಜಕೀಯ ಬದಲಾವಣೆಯ ಒಪ್ಪಂದ ನಡೆದಿದೆ ಎಂಬ ಅನುಮಾನಗಳು ಈ ಮೂಲಕ ದಟ್ಟವಾಗಿವೆ. ರಾಜ್ಯದ ಹಿರಿಯ ಸಚಿವರಿಗೇ ಹೈಕಮಾಂಡ್ ನಿರ್ಧಾರಗಳ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂಬುದು ಕುತೂಹಲ ಮೂಡಿಸಿದೆ.













Click it and Unblock the Notifications