ದುರಂತಕ್ಕೀಡಾದ ವಯನಾಡ್ ನಲ್ಲಿ 100 ಮನೆಗಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ
ಶಿರಾಡ್ ಘಾಟ್, ಆಗಸ್ಟ್ 03: ಪ್ರವಾಹ ಪೀಡಿತ ವಯನಾಡ್ ಗೆ ರಾಜ್ಯದ ನೆರವನ್ನು ಇನ್ನಷ್ಟು ವಿಸ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಶಿರಾಡಿ ಘಾಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆ ಧೂರವಾಣಿ ಮೂಲಕ ಮಾತನಾಡಿದ್ದೇನೆ. ಅಗತ್ಯ ಇರುವ ನೆರವನ್ನು ವಿಸ್ತರಿಸುವುದಾಗಿ ಹೇಳಿದರು.

ಘಟನೆಯಲ್ಲಿ ನಾಪತ್ತೆಯಾಗಿರುವ ಒಟ್ಟು ಕನ್ನಡಿಗರ ಲೆಕ್ಕ ಸಿಗಲು ಇನ್ನಷ್ಟು ಸಮಯ ಬೇಕು. ರಕ್ಷಣಾ ಕಾರ್ಯಾಚರಣೆ ಪೂರ್ತಿ ಮುಗಿದ ಬಳಿಕ ತಿಳಿಯಲಿದೆ ಎಂದರು. ವಯನಾಡಿನಲ್ಲಿ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು, ಯಾವ ವೆಚ್ಚದಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಸಿಎಂ
ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿಗಳು ಮಾರ್ಗದುದ್ದಕ್ಕೂ ನಾನಾ ರಸ್ತೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಮುಖ್ಯಮಂತ್ರಿಗಳ ಕಾರು ಬಿಳಿಕೆರೆ ಕ್ರಾಸ್ ಸಮೀಪಿಸುತ್ತಿದ್ದಂತೆ ಬಿಳಿಕೆರೆ ಕ್ರಾಸ್ ನಿಂದ ಯಡಗೊಂಡನಹಳ್ಳಿ ವರೆಗಿನ 41ಕಿಮೀ ಉದ್ದದ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ಪಡೆದರು.
600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂತು. ಮಾರ್ಗದಲ್ಲಿ ಅಲ್ಲಲ್ಲಿ ಕಾಣಿಸಿದ ರಸ್ತೆ ಗುಂಡಿಗಳಿಗೆ ಗರಂ ಆದ ಮುಖ್ಯಮಂತ್ರಿಗಳು, ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಳೆ ಇಲ್ಲದ ಸಮಯ ನೋಡಿಕೊಂಡು ಗುಂಡಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.
ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸೂಚನೆ ನೀಡಿದ್ದು, ಹೊಳೆ ನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಮಾರ್ಗವಾಗಿ ಸಾಗಿತ್ತಿದ್ದಂತೆ ಅಪಾಯದ ಸೂಚನೆ ನೀಡುತ್ತಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವೈರ್ ಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಧೂರವಾಣಿ ಮೂಲಕವೇ ಸೂಚಿಸಿದರು. ಹಳ್ಳಿ ಮೈಸೂರು ಹಾದು ಹೋಗುವಾಗ ಹಾಳಾಗಿದ್ದ ರಸ್ತೆ ವಿಭಜಕಗಳನ್ನು ಗುರುತಿಸಿ ಸರಿ ಪಡಿಸಲು ಸೂಚನೆ ನೀಡಿದರು.
ನಾನು ಹುಟ್ಟು ಹಬ್ಬ ಮಾಡಲ್ಲ: ಇವೆಲ್ಲಾ ಯಾಕೆ ತಂದ್ರಿ?
ಮಾರ್ಗದುದ್ದಕ್ಕೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಲು ಹಾರ ತುರಾಯಿ, ಶಾಲುಗಳ ಸಮೇತ ಅಲ್ಲಲ್ಲಿ ಕಾದಿದ್ದರು. ಯಾವುದನ್ನೂ ಸ್ವೀಕರಿಸದ ಸಿಎಂ, ನಾನು ಹುಟ್ಟು ಹಬ್ಬ ಆಚರಿಸಲ್ಲ ಎಂದು ಕೈ ಬೀಸಿ, ಕೈ ಮುಗಿದು ಮುಂದೆ ಸಾಗಿದರು.












Click it and Unblock the Notifications