CM Siddaramaiah: ಸಿಗರೇಟ್ ಸೇದುವುದನ್ನು ಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 15:ಸಿಗರೇಟ್ ಹಾಗೂ ತಂಬಾಕು ಸೇವನೆ ಮಾಡುವ ಶೇ.50 ಜನರು ವಯೋಸಹಜಕ್ಕಿಂತ ಮೊದಲೇ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ, ನಾನು ಮೊದಲು ಸಿಗರೇಟ್ ಸೇದುತ್ತಿದ್ದವನು, ಶಾಸಕನಾದ ನಂತರ ಸಿಗರೇಟ್ ಸೇದುವುದನ್ನು ಬಿಟ್ಟುಬಿಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ರಾಜ್ಯ NSS ಕೋಶ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಬಾಗಿತ್ವದಲ್ಲಿ ವಿಧಾನಸೌಧ ದ ಬ್ಯಾಕ್ವೆಟ್ಹಾಲ್ ನಲ್ಲಿ ಆಯೋಜಿಸಲಾಗಿದ್ದ ತಂಬಾಕು ಮುಕ್ತ ಯುವ ಅಭಿಯಾನ 2.0 ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆನೀಡಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಕವಸ್ತುಗಳ ನಿಯಂತ್ರಣಕ್ಕೆ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲು ಸರ್ಕಾರ ಯೋಚಿಸುತ್ತಿದೆ. ಯುವಜನತೆ ಈ ದುಶ್ಚಟಕ್ಕೆ ಬಲಿಯಾಗದಂತೆ, ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುವುದೇ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಯುವಜನತೆಯಲ್ಲಿ ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಬಳಕೆಯನ್ನು ಮಾಡುವುದಿಲ್ಲ, ಮಾಡಲೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಇಂದು ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಪ್ರತಿಜ್ಞೆಯನ್ನು ಅಕ್ಷರಶ: ಪಾಲಿಸುವ ಕರ್ತವ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
WHO ಸಂಸ್ಥೆಯವರ ವರದಿಯಂತೆ ಭಾರತದಲ್ಲಿ ಪ್ರತಿ ವರ್ಷ 13.5 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವಿಗೆ ಈಡಾಗುತ್ತಿದ್ದಾರೆ ಎಂಬುದು ಆತಂಕಕಾರಿ ವಿಷಯ. ಯುವಜನತೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಬದಲು ಈ ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಈ ಪ್ರಮಾಣದ ಸಾವು ಸಂಭವಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿದ್ದು, ಇದನ್ನು ನಿಗ್ರಹಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ.. ಯುವಕ ಯುವತಿಯರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಲ್ಲಿ, ಕೂಡಲೇ ದುಶ್ಚಟಗಳನ್ನು ನಿಲ್ಲಿಸಬೇಕೆಂದು ಕರೆ ನೀಡಿದರು. ರಾಜ್ಯದ ಎಲ್ಲ ಯುವಸಮುದಾಯಗಳು ದುಶ್ಚಟಗಳಿಂದ ದೂರವಾಗುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದಂತೆ, ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯಕರ ಜೀವನ ನಡೆಸಿ ಯುವ ಸಮುದಾಯದವರಲ್ಲೂ ಸಂತಸ ಮೂಡುವಂತಾಗಲಿ ಎಂದು ಹಾರೈಸಿದರು.
ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಸುಮಾರು 89.63 ಕೋಟಿ ರೂ.ಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂ.ಗಳನ್ನು ವಾಪಸ್ಸು ಪಡೆಯಲಾಗಿದೆ. ಉಳಿದ 84.63 ಕೋಟಿ ರೂ.ಗಳಲ್ಲಿ 71.54 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿದೆ. ಇನ್ನುಳಿದ ಸುಮಾರು 13 ಕೋಟಿಗಳ ಮೊತ್ತವನ್ನು ವಸೂಲು ಮಾಡಿಕೊಡುವುದಾಗಿ ಎಸ್ ಐ ಟಿ ತಿಳಿಸಿದೆ. ಈ ರೀತಿ ಒಟ್ಟು ಅವ್ಯವಹಾರವಾಗಿದ್ದ ಪೂರ್ಣ ಮೊತ್ತವನ್ನೂ ಸಹ ಮರುಪಡೆಯಲಾಗುತ್ತಿದೆ. ಈ ಮಧ್ಯೆ, ಪ್ರಕರಣ ನ್ಯಾಯಾಲಯದಲ್ಲಿ, ಮುಂಬರುವ ತೀರ್ಪಿನಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.












Click it and Unblock the Notifications