ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶಿವಮೊಗ್ಗದ ಸರ್ಕಾರಿ ಶಾಲಾ ಶಿಕ್ಷಕಿ ರತ್ನಕುಮಾರಿ
ಶಿವಮೊಗ್ಗ: ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ 2026ರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 48 ಮಂದಿ ಅತ್ಯುತ್ತಮ ಶಿಕ್ಷಕರನ್ನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಯೊಬ್ಬರು ಸ್ಥಾನ ಪಡೆದಿರುವುದು ಇಡೀ ರಾಜ್ಯಕ್ಕೆ ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಹೊಸನಗರ ತಾಲ್ಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರತ್ನಕುಮಾರಿ ಅವರು ಈ ಬಾರಿಯ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ 2026 ಗೌರವಕ್ಕೆ ಪಾತ್ರರಾಗಿದ್ದಾರೆ.

ತಮ್ಮ ವೃತ್ತಿ ಬದುಕಿನಲ್ಲಿ ಅತ್ಯಂತ ಶ್ರದ್ಧೆ, ನಿಷ್ಠೆ ಹಾಗೂ ಮಕ್ಕಳ ಮೇಲಿನ ಅಪಾರ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿರುವ ಇವರು, ಜಿಲ್ಲೆಯ ಹಾಗೂ ರಾಜ್ಯದ ಶಿಕ್ಷಣ ಇಲಾಖೆಯ ಕೀರ್ತಿ ಪತಾಕೆಯನ್ನ ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿರುವ ಗಣನೀಯ ಸೇವೆ ಹಾಗೂ ವಿನೂತನ ಬೋಧನಾ ವಿಧಾನಗಳು ಇವರನ್ನು ಈ ಅತ್ಯುನ್ನತ ಪುರಸ್ಕಾರಕ್ಕೆ ಅರ್ಹರನ್ನಾಗಿಸಿವೆ.
ಗ್ರಾಮೀಣ ಶಿಕ್ಷಣಕ್ಕೆ ಸಂದ ಗೌರವ
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯ ನಡುವೆಯೂ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಭವಿಷ್ಯವನ್ನು ರೂಪಿಸುವುದು ನಿಜಕ್ಕೂ ಒಂದು ಸವಾಲಿನ ಕೆಲಸ. ಇಂತಹ ಸವಾಲನ್ನು ಮೆಟ್ಟಿ ನಿಂತು, ಸಮಟಗಾರು ಶಾಲೆಯ ಮಕ್ಕಳಲ್ಲಿ ಅಕ್ಷರ ಜ್ಞಾನವನ್ನು ನೀಡುತ್ತಿರುವ ರತ್ನಕುಮಾರಿ ಅವರ ಸಾಧನೆ ಅನನ್ಯವಾದದ್ದು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಇವರ ಕಾರ್ಯವೈಖರಿ, ರಾಜ್ಯದ ಸಮಸ್ತ ಶಿಕ್ಷಕ ಸಮುದಾಯಕ್ಕೆ ಒಂದು ಅತ್ಯುತ್ತಮ ಮಾದರಿಯಾಗಿದೆ. ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮತ್ತಷ್ಟು ಸ್ಫೂರ್ತಿ ನೀಡಿದೆ.
ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರದ ರಾಜಧಾನಿ ನವದೆಹಲಿಯ ವಿಜ್ಞಾನ ಭವನದಲ್ಲಿ ಅದ್ಧೂರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಈ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ರತ್ನಕುಮಾರಿ ಸೇರಿದಂತೆ ದೇಶದ 48 ಶ್ರೇಷ್ಠ ಶಿಕ್ಷಕರಿಗೆ ಈ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಪ್ರದಾನ ಮಾಡಿ, ಅವರನ್ನು ಗೌರವಿಸಲಿದ್ದಾರೆ.
ಶಿಕ್ಷಣವನ್ನು ಕೇವಲ ಒಂದು ವೃತ್ತಿಯಾಗಿ ಸ್ವೀಕರಿಸದೆ, ಪವಿತ್ರ ಕಾಯಕವೆಂದು ಭಾವಿಸಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ರತ್ನಕುಮಾರಿ ಅವರಿಗೆ ಈ ಪುರಸ್ಕಾರ ಒಲಿದಿರುವುದು ಅತ್ಯಂತ ಸಾರ್ಥಕತೆಯ ಕ್ಷಣ. ಗ್ರಾಮೀಣ ಮಕ್ಕಳ ಬಾಳಿನಲ್ಲಿ ಜ್ಞಾನದ ಬೆಳಕು ಚೆಲ್ಲುತ್ತಿರುವ ಅವರ ಈ ಶೈಕ್ಷಣಿಕ ಪಯಣ ಭವಿಷ್ಯದಲ್ಲೂ ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ.


Click it and Unblock the Notifications
