ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರ ಊಟ ಹಾಕಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ!
ಮದುವೆ ಎಂದರೆ ಎರಡು ಮನಸ್ಸುಗಳು, ಕುಟುಂಬಗಳ ನಡುವೆ ಬೆಸೆಯುವ ಒಂದು ಸುಂದರ ಬಂಧ. ಆದರೆ ಇತ್ತೀಚಿನ ದಿನಗಳಲ್ಲಿ ವಿವಾಹ ಮಹೋತ್ಸವಗಳು ಕೇವಲ ಸಂಪ್ರದಾಯವಾಗಿ ಉಳಿದಿಲ್ಲ, ಅದೊಂದು ಪ್ರತಿಷ್ಠೆಯ ಸಂಕೇತವಾಗಿ ಬದಲಾಗಿದೆ. ಅದರಲ್ಲೂ ಮದುವೆಯ ನಂತರ ಅದ್ದೂರಿಯಾಗಿ ನೀಡಲಾಗುವ ಬೀಗರ ಊಟ ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮಸ್ಥರು ಒಂದು ಐತಿಹಾಸಿಕ ನಿರ್ಧಾರವನ್ನ ಕೈಗೊಂಡಿದ್ದಾರೆ. ಬರಗಾಲದಿಂದ ಕಂಗೆಟ್ಟಿರುವ ರೈತರು ಹಾಗೂ ಬಡ ಕುಟುಂಬಗಳನ್ನ ಸಾಲದ ಸುಳಿಯಿಂದ ಪಾರು ಮಾಡಲು ಗ್ರಾಮದಲ್ಲಿ ಬೀಗರ ಊಟವನ್ನಾ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

ಶಿಕಾರಿಪುರ ಹರಗಿ ಗ್ರಾಮದಲ್ಲಿ ಬೀಗರ ಊಟ ನಿಷೇಧ
ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಹರಗಿ ಗ್ರಾಮದಲ್ಲಿ ಬಹುತೇಕರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದೆಲ್ಲಾ ಮದುವೆ ಮುಗಿದ ಬಳಿಕ ಕೇವಲ 10 ರಿಂದ 15 ಮಂದಿ ಆಪ್ತರಿಗೆ ಮಾತ್ರ ಸೀಮಿತವಾಗಿ ನಡೆಯುತ್ತಿದ್ದ ಈ ಬೀಗರ ಊಟ, ಈಗೀಗ ದೊಡ್ಡ ಟ್ರೆಂಡ್ ಆಗಿ ಬದಲಾಗಿದೆ.
'ಅವರು ಅಷ್ಟು ಕುರಿ ಕಡಿದಿದ್ದಾರೆ, ನಾವು ಕಮ್ಮಿ ಮಾಡಬಾರದು' ಎಂಬ ಪೈಪೋಟಿಗೆ ಬಿದ್ದು ಜನರು ಈ ಒಂದು ಸಣ್ಣ ಸಾಂಪ್ರದಾಯಿಕ ಊಟಕ್ಕೆ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತಿದೆ.
ಈ ಪದ್ಧತಿಯು ಮೂಲತಃ ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ರಾಮನಗರ ಕಡೆಯದ್ದಾದರೂ, ಇದೀಗ ಮಲೆನಾಡಿಗೂ ವಿಸ್ತರಿಸಿದೆ. ಈ ಅನಗತ್ಯ ಸಂಪ್ರದಾಯವನ್ನ ಬೇರು ಸಮೇತ ಕೀಳಲು ಊರಿನ ಜನರೆಲ್ಲ ಸೇರಿ ಈ ಬೀಗರ ಊಟವನ್ನಾ ನಿಷೇಧ ಮಾಡಿದ್ದಾರೆ.
ಬಾಡೂಟ ರದ್ದು ಮತ್ತು ಭಾರಿ ದಂಡ
ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ತೆಗೆದುಕೊಂಡಿರುವ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಊರಿನ ನಿಯಮವನ್ನ ಮೀರಿ ಮುಂದಿನ ದಿನಗಳಲ್ಲಿ ಯಾರಾದರೂ ಬೀಗರ ಊಟ ಮಾಡಿದ್ದು ಕಂಡುಬಂದರೆ, ಅಂಥವರಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಕೇವಲ ಊಟ ಹಾಕುವವರಿಗೆ ಮಾತ್ರವಲ್ಲ, ಆ ಊಟಕ್ಕೆ ಹೋಗಿ ಉಂಡು ಬರುವವರಿಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಕಠಿಣ ನಿಯಮದ ಮೂಲಕ ಆರ್ಥಿಕ ಶಿಸ್ತು ತರಲು ಗ್ರಾಮಸ್ಥರು ಮುಂದಾಗಿದ್ದಾರೆ.
ಮದುವೆ ದುಂದುವೆಚ್ಚ ಮತ್ತು ಸಾಲದ ಶೂಲ
ಈಗಿನ ಕಾಲದಲ್ಲಿ ಶಾಮಿಯಾನ, ಟೇಬಲ್, ದಿನಸಿ, ಬಾಡೂಟದ ಸಾಮಗ್ರಿಗಳು ಹಾಗೂ ಬಾಣಸಿಗರ ಕೂಲಿ ಸೇರಿ ಒಂದು ಬೀಗರ ಊಟಕ್ಕೆ ಕನಿಷ್ಠ 8 ರಿಂದ 15 ಲಕ್ಷ ರೂಪಾಯಿಗಳವರೆಗೆ ಖರ್ಚಾಗುತ್ತಿದೆ. ಬಡ ಕುಟುಂಬಗಳು ಕನಿಷ್ಠ 2 ಲಕ್ಷ ರೂಪಾಯಿ ಸಾಲ ಮಾಡಿಯಾದರೂ ಊಟ ಹಾಕಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಅದರಲ್ಲೂ ಈ ಹೆಣ್ಣು ಹೆತ್ತವರ ಪಾಲಿಗೆ ಇದೊಂದು ಬಹುದೊಡ್ಡ ಆರ್ಥಿಕ ಹೊರೆಯಾಗಿತ್ತು. ಇಂತಹ ಮದುವೆ ದುಂದುವೆಚ್ಚ ಮತ್ತು ಸಾಲದ ಶೂಲದಿಂದ ಜನರನ್ನ ಕಾಪಾಡಲು ಹರಗಿ ಗ್ರಾಮದ ಪ್ರಮುಖರು ಈ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಗ್ರಾಮಸ್ಥರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ
ಹರಗಿ ಗ್ರಾಮಸ್ಥರು ತೆಗೆದುಕೊಂಡಿರುವ ಈ ನಿರ್ಧಾರ ಈಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಹರಗಿ ಸ್ವಸಹಾಯ ಸಂಘದ ಉಪಾಧ್ಯಕ್ಷ ಷಣ್ಮುಖಪ್ಪ ಕೋಡಿಹಳ್ಳಿ, "ಇತ್ತೀಚೆಗೆ ಬೀಗರ ಊಟದ ಪದ್ಧತಿ ಮಿತಿಮೀರಿದ್ದು, ಹಿಂದುಳಿದ ವರ್ಗಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ಒಗ್ಗಟ್ಟಿನಿಂದ ಈ ನಿರ್ಧಾರ ಕೈಗೊಂಡಿದ್ದೇವೆ" ಎಂದಿದ್ದಾರೆ.
ಶಿಕಾರಿಪುರ ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಪ್ರಕಾಶ್ ಮುದುಬ ಸಿದ್ಧಾಪುರ ಅವರು ಸಹ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಸಂಪ್ರದಾಯಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಹೊರೆ ತಗ್ಗಲಿದ್ದು, ಇತರ ಗ್ರಾಮಗಳೂ ಸ್ವಯಂಪ್ರೇರಿತವಾಗಿ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.


Click it and Unblock the Notifications
