'ಶಕ್ತಿ' ಯೋಜನೆ; ಸಾರಿಗೆ ಸಂಸ್ಥೆಗಳಿಗೆ ಅನುದಾನ ಕೊಟ್ಟ ಸರ್ಕಾರ
ಬೆಂಗಳೂರು, ಆಗಸ್ಟ್ 02; ಕರ್ನಾಟಕದ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಮೊದಲು ಜಾರಿಗೆ ಬಂದಿದ್ದು 'ಶಕ್ತಿ' ಯೋಜನೆ. ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ನಡೆಸುವ ಈ ಯೋಜನೆ ಯಶಸ್ವಿಯಾಗಿದೆ. ಗುರುತಿನ ಚೀಟಿ ತೋರಿಸಿ ಶೂನ್ಯ ದರದ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಸಂಚಾರ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೂನ್ 11ರಂದು 'ಶಕ್ತಿ' ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆ ಜಾರಿಯಾದ ಸರ್ಕಾರಿ ಬಸ್‌ಗಳ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ.

'ಶಕ್ತಿ' ಯೋಜನೆಯಡಿ ಸಾರಿಗೆ ನಿಗಮಗಳು ಮಹಿಳೆಯರಿಗೆ ಶೂನ್ಯ ದರದ ಟಿಕೆಟ್ ನೀಡುತ್ತವೆ. ಸಾರಿಗೆ ನಿಗಮಕ್ಕೆ ಪ್ರತಿ ತಿಂಗಳು ಅನುದಾನ ನೀಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಈಗ 4 ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ಎಷ್ಟು ಅನುದಾನ ಬಿಡುಗಡೆ; ಸಾರಿಗೆ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪುಷ್ಪ ವಿ. ಎಸ್. ಆದೇಶ ಹೊರಡಿಸಿದ್ದಾರೆ. ಒಟ್ಟು 4 ನಿಗಮಗಳಿಗೆ ಸೇರಿ 12548.21 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಈ ಆದೇಶ 'ಶಕ್ತಿ' ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಜೂನ್-2023ರ ಮಾಹೆಯಲ್ಲಿ ಉಚಿತವಾಗಿ ಪ್ರಯಾಣಿಸಿರುವ ಪ್ರಯಾಣ ವೆಚ್ಚದ ಮರುಪಾವತಿಗಾಗಿ, ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಸರ್ಕಾರದ ಆದೇಶದಲ್ಲಿ ರಾಜ್ಯದ 4 ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ಯ, ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಲು ದಿನಾಂಕ 11/06/2023ರಿಂದ 'ಶಕ್ತಿ' ಯೋಜನೆಯನ್ನು ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ ಎಂದು ಹೇಳಿದೆ.
2023-24ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು-ಬೇಡಿಕವಾರು ಸಂಪುಟ-1ರ ಅಭಿಯಾಚನೆ ಕ್ರಮಾಂಕ05ರಲ್ಲಿ 'ಶಕ್ತಿ' ಯೋಜನೆಗಾಗಿ 2023-24 ಸಾಲಿನ ಶೀರ್ಷಿಕೆ ಸಹಾಯಧನದಡಿ ರೂ. 198800.00 ಲಕ್ಷಗಳು ಮತ್ತು ಲೆಕ್ಕ ಶೀರ್ಷಿಕೆ ಪರಿಶಿಷ್ಟ ಜಾತಿ ಉಪ ಯೋಜನೆ ರಡಿ ರೂ. 5600.00 ಲಕ್ಷಗಳು ಹಾಗೂ ಗಿರಿಜನ ಉಪಯೋಜನೆ ರಡಿ ರೂ.25200.00 ಲಕ್ಷಗಳು ಹೀಗೆ ಒಟ್ಟಾರೆ ರೂ. 280000.00 ಲಕ್ಷಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇವರು ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಪ್ರಯಾಣಿಸಿದ ಕರ್ನಾಟಕದ ನಿವಾಸಿ ಮಹಿಳೆಯರಿಗೆ ವಾಸ್ತವಿಕ ಪ್ರಯಾಣದಂತೆ ಇ. ಟಿ. ಎಂ. ಯಂತ್ರದ ಮುಖಾಂತರ ಶೂನ್ಯ ಟಿಕೆಟ್ ವಿತರಿಸಿದ್ದು, ಅದರಂತೆ ದಿನಾಂಕ 11/06/2023 ರಿಂದ (ಮಧ್ಯಾಹ್ನ 1 ಗಂಟೆಯಿಂದ) ದಿನಾಂಕ 30/06/2023 ರವರೆಗೆ ನಾಲ್ಕು ನಿಗಮಗಳ ಬಸ್ಸುಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿರುವ ನಿಟ್ಟಿನಲ್ಲಿ ಉಂಟಾಗಿರುವ ವಾಸ್ತವಿಕ ವೆಚ್ಚ ರೂ. 2,50,96,43,365 ಬಿಡುಗಡೆಗೊಳಿಸುವಂತೆ ಕೋರಿರುತ್ತಾರೆ ಎಂದು ಹೇಳಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದ 4 ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ 'ಶಕ್ತಿ' ಯೋಜನೆಯಡಿ ಸಾರಿಗೆಗಳಲ್ಲಿ ದಿನಾಂಕ 11/06/2023 ರಿಂದ (ಮಧ್ಯಾಹ್ನ 1.00 ಗಂಟೆಯಿಂದ) ದಿನಾಂಕ 30/06/2023ರ ಅಂತ್ಯದವರೆಗೆ ಪ್ರಯಾಣಿಸಲು ವಿತರಿಸಿದ ಶೂನ್ಯ ಟಿಕೆಟ್‌ಗಳ ವೆಚ್ಚದ ಮರುಪಾವತಿಗಾಗಿ ರೂ. 12548.21 ಲಕ್ಷಗಳನ್ನು ಬಿಡುಗಡೆಗೊಳಿಸಿ ಆದೇಶಿಸಿದೆ.
ಯಾವುದಕ್ಕೆ ಎಷ್ಟು ಬಿಡುಗಡೆ (ರೂ. ಲಕ್ಷಗಳಲ್ಲಿ)
* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ- 4715.12
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - 2185.10
* ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ - 3257.59
* ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ - 2390.40












Click it and Unblock the Notifications