ವಿಧಾನಸಭೆ ಚುನಾವಣೆ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಫಿ ಬೆಳ್ಳಾರೆ ಸಂಭಾವ್ಯ ಅಭ್ಯರ್ಥಿ!
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಫಿ ಬೆಳ್ಳಾರೆ ಒಬ್ಬರು ಎಂದು ಎಸ್‌ಡಿಪಿಐ ಹೇಳಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಫಿ ಬೆಳ್ಳಾರೆ ಒಬ್ಬರು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೇಳಿದೆ. ಅಂತಿಮ ಪಟ್ಟಿಯನ್ನು ಫೆಬ್ರವರಿ ಅಂತ್ಯದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಜುಲೈ 26 ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಪೊಲೀಸರು ಹಲವರನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ.ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 14 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಇವರ ಪೈಕಿ ಶಫಿ ಬೆಳ್ಳಾರೆ ಒಬ್ಬರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ (BJP) ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮೃತ ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಜೊತೆಗೆ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಕೋಳಿ ಅಂಗಡಿ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದರು.

ಇಬ್ಬರು ಆರೋಪಿಗಳ ಪತ್ತೆಗೆ 10 ಲಕ್ಷ ಬಹುಮಾನ
ಬಂಟ್ವಾಳ ತಾಲೂಕಿನ ಕೊಡಾಜೆಯ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಷರೀಫ್ ಮತ್ತು ನೆಕ್ಕಿಲಾಡಿಯ ಅಗ್ನಾಡಿ ಹೌಸ್ನ ಅಬೂಬಕರ್ ಮಗ ಮಸೂದ್ ಕೆ.ಎ ಆರೋಪಿಗಳ ಸುಳಿವು ನೀಡಿದವರಿಗೆ ತಲಾ 5 ಲಕ್ಷದಂತೆ ಇಬ್ಬರಿಂದ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಅಧಿಕಾರಿಗಳು ಘೋಷಣೆ ಮಾಡಿದ್ದರು. ಆರೋಪಿಗಳ ಸುಳಿವು ಸಿಕ್ಕರೆ ಬೆಂಗಳೂರಿನ ಎನ್‌ಐಎ ಎಸ್ಪಿ ಕಚೇರಿಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.

ನಾಲ್ಕು ಆರೋಪಿಗಳ ಪತ್ತೆಗೆ 14 ಲಕ್ಷ ಬಹುಮಾನ
ಪ್ರವೀಣ್ ಹತ್ಯೆ ಪ್ರಕರಣದ ಸಂಬಂಧಿಸಿದಂತೆ ಜನವರಿ 11ರಂದು ರಾಷ್ಟ್ರೀಯ ತನಿಖಾ ದಳ 4 ಆರೋಪಿಗಳ ಪತ್ತೆ ಒಟ್ಟು 14 ಲಕ್ಷ ರೂ ಬಹುಮಾನ ಘೋಷಣೆ ಮಾಡಿತ್ತು. ಪ್ರಮುಖ ಆರೋಪಿಗಳಾದ ಮೊಹಮ್ಮದ್ ಮುಸ್ತಫಾಗೆ ಹಾಗೂ ತುಫೈಲ್‌ಗೆ ತಲಾ 5 ಲಕ್ಷ ಹಾಗೂ ಉಮರ್ ಫಾರೂಕ್ ಮತ್ತು ಅಬೂಬಕ್ಕರ್ ಸಿದ್ದಿಕ್ಗೆ ತಲಾ 2 ರೂ. ಬಹುಮಾನ ಘೋಷಿಸಿದೆ.












Click it and Unblock the Notifications