SFS in Belagavi: ಉತ್ತರ ಕರ್ನಾಟಕಕ್ಕೂ ಬಂತು ಐಫೋನ್ ತಯಾರಿಕೆ ಕಂಪನಿ, ₹250 ಕೋಟಿ ಹೂಡಿಕೆ ಪ್ರಸ್ತಾವನೆ
ಬೆಂಗಳೂರು, ಜೂನ್ 29: ಆ್ಯಪಲ್ ಐಫೋನ್ ತಯಾರಿಕಾ ಸಂಸ್ಥೆಯ ಪಾಲುದಾರ ಫಾಕ್ಸ್‌ಕಾನ್ ಕಂಪನಿಯು ಬೆಂಗಳೂರಿನಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ಈಗಾಗಲೇ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಬೆಳಗಾವಿಯಲ್ಲಿ ಒಟ್ಟು ಬರೋಬ್ಬರಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲು ಮತ್ತೊಂದು ಕಂಪನಿ ಮುಂದೆ ಬಂದಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬಂಡವಾಳ ಹೂಡಿಕೆ ಕುರಿತು ಬುಧವಾರ ಭೇಟಿಯಾಗಿದ್ದ ಎಸ್‌ಎಫ್‌ಎಸ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ ನಿಯೋಗದ ಬೇಡಿಕೆಗಳನ್ನು ಕೇಳಿದ ಬಳಿಕ ಅವರು ಈ ಬಗ್ಗೆ ಪ್ರತಿಕ್ರಿಯಿಸಿದರು.

ಆ್ಯಪಲ್ ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್‌ಎಫ್‌ಎಸ್ (SFS) ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ಈ ಪ್ರಸ್ತಾವನೆ ಬಗ್ಗೆ ಸರ್ಕಾರದೊಂದಿಗೆ ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಸದ್ಯ ಕಂಪನಿಯ ಬಂಡಾವಳ ಹೂಡಿಕೆಯು ಪ್ರಸ್ತಾವನೆಯಾಗಿದೆ. ಬಿಡಿಭಾಗ ತಯಾರಿಕೆ ಘಟಕಗಳಿಗಾಗಿ ಸುಮಾರು 30 ಎಕರೆ ಭೂಮಿಯನ್ನು ಕೇಳಿದೆ. ಇದು ಸ್ವಾಗತಾರ್ಹ ಎಂದಿದ್ದಾರೆ. ಸರ್ಕಾರಕ್ಕೆ ಈ ವಿಚಾರವನ್ನು ಗಮನಕ್ಕೆ ತಂದು ಕೆಲವೇ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ನೂರಾರು ಉದ್ಯೋಗ ಸೃಷ್ಟಿ
SFS ಕಂಪನಿ ಈಗಾಗಲೇ ಬೆಳಗಾವಿಯಲ್ಲಿ ಏರೋಸ್ಪೇಸ್ ಉದ್ಯಮಕ್ಕೆ ಬೇಕಾಗುವ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಈಗ ಅದು ಆಪಲ್ ಫೋನ್‌ಗೆ ಬೇಕಾಗುವ ಬಿಡಿಭಾಗಗಳ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ತೆರೆಯಲು ಮನಸ್ಸು ಮಾಡಿದೆ. ಇದರಿಂದ ಮುಂದಿನ ಮೂರು ವರ್ಷಗಳಲ್ಲಿ 500 ಜನ ತಂತ್ರಜ್ಞರಿಗೆ ಉದ್ಯೋಗ ಸಿಗಲಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಇದರ ಜೊತೆಗೆ ಪರೋಕ್ಷವಾಗಿ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ರಾಜ್ಯದ ಆರ್ಥಿಕತೆಗೂ ಲಾಭವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಬೆಳಗಾವಿ ಜಿಲ್ಲೆಯನ್ನು ರಾಜ್ಯದ ಪ್ರಮುಖ ಉದ್ಯಮ ವಲಯಗಳಲ್ಲಿ ಒಂದಾಗಿ ಬೆಳೆಸಲಾಗುತ್ತಿದೆ. ಅಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಇದು ಮುಂಬೈ-ಬೆಂಗಳೂರು-ಚೆನ್ನೈ ಕಾರಿಡಾರ್‍ನಲ್ಲಿ ಬರುವುದರಿಂದ ಔದ್ಯಮಿಕ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರವು ತೀರ್ಮಾನಿಸಿದೆ ಎಂದು ಅವರು ನುಡಿದರು.
ಬೆಂಗಳೂರಲ್ಲಿ ಐಫೋನ್ ತಯಾರಿಕೆ ಘಟಕ
ಆ್ಯಪಲ್ ಐಫೋನ್ ತಯಾರಿಸುವ ಸಂಸ್ಥೆಯ ಪಾಲುದಾರನಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸಲು ಮುಂದಾಗಿದೆ. ಈ ಸಂಬಂಧ ಬೆಂಗಳೂರಿನ ಹೊಸ ಘಟಕ ಸ್ಥಾಪಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸುಮಾರು 5,750 ಕೋಟಿ ರೂ. (700 ಮಿಲಿಯನ್ ಡಾಲರ್) ಹೂಡಿಕೆ ಮಾಡಲು ಮುಂದಾಗಿದೆ. ಸರ್ಕಾರ ಜೊತೆಗಿನ ಚರ್ಚೆ ಬಳಿಕ ಈಗಾಗಲೇ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಇದಕ್ಕಾಗಿ ಜಾಗ ಅಂತಿಮಗೊಳಿಸಿದೆ. ಇದೀಗ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕ ಸ್ಥಾಪನೆ ಬೆಳಗಾವಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಚಿವರ ನಿಯೋಗ ಭೇಟಿ ಸಂದರ್ಭದಲ್ಲಿ ಎಸ್‌ಎಫ್‌ಎಸ್ ಕಂಪನಿಯ ನಿರ್ದೇಶಕ ಪ್ರಶಾಂತ್ ಕೋರೆ, ಕೈಗಾರಿಕಾ ಇಲಾಖೆ ಅಯುಕ್ತೆ ಗುಂಜನ್ ಕೃಷ್ಣ ಇದ್ದರು.












Click it and Unblock the Notifications