ದ್ವಿತೀಯ ಪಿಯುಸಿ: ಉತ್ತರ ಪತ್ರಿಕೆ, ಸ್ಕ್ಯಾನಿಂಗ್ ಗೆ 7 ಸಾವಿರ ಅರ್ಜಿ
ಬೆಂಗಳೂರು, ಮೇ.2: ದ್ವಿತೀಯ ಪಿಯುಸಿ ಫಲಿತಾಂಶ ಹೊರಬಂದು ಇನ್ನು ಕೇವಲ ಎರಡು ದಿನಗಳು ಕಳೆದಿವೆ ಅಷ್ಟರಲ್ಲೇ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಪಾಮನಕ್ಕಾಗಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಆನ್‌ಲೈನ್‌ನಲ್ಲಿ ಏಳು ಸಾವಿರ ಅರ್ಜಿಗಳು ಬಂದಿವೆ.
ಇದೇ ಪ್ರಥಮ ಬಾರಿಗೆ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕದ ಆನ್‌ಲೈನ್ ಪಾವತಿಗೆ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿರುವುದರಿಂದ ಮೇ 1ರಂದು ರಜೆ ದಿನವಾಗಿದ್ದರೂ 7 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ಇದುವರೆಗೆ ಏಳು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಸುಮಾರು ಎರಡು ಸಾವಿರ ಅರ್ಜಿಗಳ ಶುಲ್ಕ ಸ್ವೀಕರಿಸಲಾಗಿದೆ. ಉಳಿದ ಅರ್ಜಿಗಳ ಶುಲ್ಕ ಪಾವತಿಯಾಗಬೇಕಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸ್ವೀಕರಿಸಲು ಮೇ 7 ಕೊನೆಯ ದಿನವಾಗಿದೆ.

ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿಪಡಿಸಲಾಗಿದೆ. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 14 ಕಡೇ ದಿನವಾಗಿದೆ. ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ನಡುವೆ ಫಲಿತಾಂಶ ತಡೆಹಿಡಿದಂತಹ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಗೆ ಎಡತಾಕುತ್ತಿದ್ದಾರೆ.
ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವ ಮತ್ತಿತರ ಕಾರಣಗಳಿಂದ ಕೆಲ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಅಂತಹ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರ ಮೂಲಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.











Click it and Unblock the Notifications