ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ: ಮಹತ್ವದ ಹೇಳಿಕೆ ನೀಡಿದ ಡಿ ಕೆ ಸುರೇಶ್
ರಾಮನಗರ, ಮಾರ್ಚ್ 27: ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಪಕ್ಷ ಸೇರ್ಪಡೆಯಾಗುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಬಿಜೆಪಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರನ್ನ ಭೇಟಿ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಡಿ ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ರಾಮನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಸುರೇಶ್, ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಅವರು ಬಹಳ ದಿನಗಳಿಂದ ಪಕ್ಷ ಸೇರುವುದಾಗಿ ಹೇಳುತ್ತಿದ್ದಾರೆ. ಅವರ ಸ್ವಯಂ ತೀರ್ಮಾನದ ಬಗ್ಗೆ ಜಿಲ್ಲೆಯ ಮುಖಂಡರು ಹಾಗೂ ನಾಯಕರ ಜತೆ ಚರ್ಚೆ ಮಾಡಿ ಅವರ ಅಭಿಪ್ರಾಯದ ಮೇರೆಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಕೋಲಾರದಲ್ಲಿ ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂಬ ಆಗ್ರಹದೊಂದಿಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ರಾಜೀನಾಮೆ ಬೆದರಿಕೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ" ಎಂದು ತಿಳಿಸಿದರು.
ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳ ಕಾರ್ಯಕರ್ತರ ಸೇರ್ಪಡೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನಿರಂತರವಾಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದು, ಈಗ ನನಗೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇನೆ. ಜನರಿಂದ ನನಗೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
"ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಬಹಳ ಉತ್ಸಾಹದಿಂದ ನನಗೆ ಬೆಂಬಲ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಹಲವು ಕಾರ್ಯಕರ್ತರು ಆ ಪಕ್ಷಗಳನ್ನು ತೊರೆದು ನಮ್ಮ ಪಕ್ಷ ಸೇರುತ್ತಿದ್ದಾರೆ. ಇದರಿಂದಾಗಿ ನಮಗೆ ಮತ್ತಷ್ಟು ಶಕ್ತಿ ಹೆಚ್ಚಾಗಿದೆ" ಎಂದರು.
ನಾಳೆ 11 ಗಂಟೆಗೆ ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆ ವಿಚಾರವಾಗಿ ಕೇಳಿದಾಗ, "ನಾಳೆ ಬೆಳಗ್ಗೆ 11 ಗಂಟೆಗೆ ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಗೃಹ ಸಚಿವರಾದ ಪರಮೇಶ್ವರ್ ಅವರು ಕೂಡ ಆಗಮಿಸಲಿದ್ದಾರೆ. ಅದೇ ರೀತಿ ಸಾರ್ವಜನಿಕರಿಗೂ ಆಹ್ವಾನ ನೀಡಿ, ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.












Click it and Unblock the Notifications