ಎಂಡಿ ಸೀಟುಗಳ ಹಂಚಿಕೆಯಲ್ಲಿ ಅಕ್ರಮ; ಪರ ರಾಜ್ಯದ ಪಾಲಾದ ಸೀಟು
ಬೆಂಗಳೂರು, ಆಗಸ್ಟ್ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಡಿ ಸೀಟುಗಳ ಹಂಚಿಕೆಗಾಗಿ ನಡೆಸಿದ ಕೌನ್ಸಿಲಿಂಗ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಸೀಟುಗಳನ್ನು ಮೊದಲೇ ಬ್ಲಾಕ್ ಮಾಡಿಕೊಂಡು ರಾಜ್ಯದ ವಿದ್ಯಾರ್ಥಿಗಳಿಗೆ ನೀಡದೆ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಿಕೊಳ್ಳಲಾಗಿದೆ ಎಂದು ದೂರು.
Recommended Video
ಕಳೆದ ಮಂಗಳವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಂಬಿಬಿಎಸ್ ನಂತರದ ಎಂಡಿ ಸೀಟುಗಳ ಹಂಚಿಕೆಗೆ ಕೌನ್ಸಿಲಿಂಗ್ ನಡೆಸಿತ್ತು. ಒಟ್ಟು 161 ಸೀಟುಗಳು ಲಭ್ಯವಿದ್ದವು. ಆಗ ರಾತ್ರಿ 11 ಗಂಟೆ ತನಕ ಸ್ಥಳೀಯ ವಿದ್ಯಾರ್ಥಿಗಳಿಗೆ 9 ಸೀಟುಗಳನ್ನು ತೋರಿಸದೇ ಬ್ಲಾಕ್ ಮಾಡಿಕೊಳ್ಳಲಾಗಿದೆ.
ರಾತ್ರಿಯ ಆಂಧ್ರ ಪ್ರದೇಶದ ವಿದ್ಯಾರ್ಥಿಗಳ ರ‍್ಯಾಂಕ್ ಕಡಿಮೆ ಇದ್ದರೂ ಅವರಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳು, ಸಚಿವರು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬುದು ಆರೋಪ. ಈ ಕುರಿತು ಕಾನೂನು ಹೋರಾಟ ಸಹ ಆರಂಭವಾಗಿದೆ.

ರೇಡಿಯಾಲಜಿ ವಿಭಾಗದ ಸೀಟು 85 ಲಕ್ಷಕ್ಕೆ ಬೆಂಗಳೂರಿನ ಕಿಮ್ಸ್ ಕಾಲೇಜಿನಲ್ಲಿ ಲಭ್ಯವಿದೆ. 85, 86 ಸಾವಿರ ರ‍್ಯಾಂಕ್ ಪಡೆದ ಕರ್ನಾಟಕದ ವಿದ್ಯಾರ್ಥಿಗಳು ಸೀಟು ಸಿಗುತ್ತದೆ ಎಂದು ಕಾಯುತ್ತಿದ್ದರು. ಆದರೆ ಆ ಸೀಟನ್ನು ಆಂಧ್ರ ಪ್ರದೇಶದ ವಿದ್ಯಾರ್ಥಿಗಳಿಗೆ 3 ಕೋಟಿಗೂ ಅಧಿಕ ಹಣಕ್ಕೆ ಮಾರಿಕೊಳ್ಳಲಾಗಿದೆ ಎಂಬುದು ಆರೋಪ.
ಕರ್ನಾಟಕದ ವಿದ್ಯಾರ್ಥಿಗಳು 85, 86 ಸಾವಿರ ರ‍್ಯಾಂಕ್‌ಗಳಿಸಿದರೂ ಸಿಗದ ಸೀಟು ಆಂಧ್ರ ಪ್ರದೇಶದ ವಿದ್ಯಾರ್ಥಿನಿ ಒಂದು ಲಕ್ಷಕ್ಕೂ ಅಧಿಕ ರ‍್ಯಾಂಕ್ ಇದ್ದರೂ ಸಿಕ್ಕಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸೀಟುಗಳನ್ನು ತೋರಿಸದೇ ಬೇರೆ ರಾಜ್ಯಕ್ಕೆ ಮಾರಿಕೊಂಡಿದ್ದಾರೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.
ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಮೊದಲು ಕಡಿಮೆ ರ‍್ಯಾಂಕ್ ಹೊಂದಿರುವ ವಿದ್ಯಾರ್ಥಿಗಳಿಗೆ ಸೀಟು ಸಿಗಬೇಕು. ಆದರೆ 1 ಲಕ್ಷಕ್ಕೂ ಅಧಿಕ ರ‍್ಯಾಂಕ್ ಇರುವವರಿಗೆ ಬ್ಲಾಕ್ ಮಾಡಿಸಿ ಸೀಟು ಹಂಚಲಾಗಿದೆ.
ಕೌನ್ಸಿಲಿಂಗ್ ವೇಳೆ ನಡೆದ ಅಕ್ರಮದ ಕುರಿತು ಪೋಷಕರು ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ. ಸೀಟು ಬ್ಲಾಕ್ ದಂಧೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆಯೇ? ಕಾದು ನೋಡಬೇಕು.












Click it and Unblock the Notifications