ದಕ್ಷಿಣ ಕನ್ನಡ: 1 ಲಕ್ಷ ಮಕ್ಕಳಿಗೆ 5 ಕೋಟಿ ರೂ. ಸ್ಕಾಲರ್‌ಶಿಪ್ ಕೊಡಿಸಿದ 83 ಹರೆಯದ ನಿವೃತ್ತ ಶಿಕ್ಷಕ
ಬಡತನ ಎನ್ನುವ ಒಂದೇ ಕಾರಣಕ್ಕಾಗಿ ಯಾವುದೇ ಮಗುವಿನ ಶಿಕ್ಷಣ ನಿಲ್ಲಿಸಬಾರದು ಎಂದು ದೃಢವಾದ ಸಂಕಲ್ಪ ಮಾಡಿಕೊಂಡು ಕಳೆದ ಎರಡು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿ ಕೆ. ನಾರಾಯಣ ನಾಯ್ಕ್. ಇವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಪ್ರೀತಿಯ 'ಸ್ಕಾಲರ್‌ಶಿಪ್ ಮಾಸ್ಟರ್' ಎಂದೇ ಖ್ಯಾತರಾಗಿರುವ ಇವರಿಗೆ ಈಗ 83 ವರ್ಷ ನೋಡಿ.
38 ವರ್ಷಗಳ ಕಾಲ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತರಾದ ನಾರಾಯಣ ನಾಯ್ಕ್ ಅವರು, ನಿವೃತ್ತಿಯ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯಲಿಲ್ಲ. ಬದಲಿಗೆ, ಬಡತನದ ಕಾರಣಕ್ಕೆ ಉನ್ನತ ಶಿಕ್ಷಣದಿಂದ ಹಿಂದುಳಿಯುತ್ತಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಸರೆಯಾಗುವ ಹೊಸತೊಂದು ಕೆಲಸವನ್ನಾ ಆರಂಭಿಸಿದರು. ಕಳೆದ 23 ವರ್ಷಗಳಲ್ಲಿ ಇವರ ಶ್ರಮದಿಂದಾಗಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 5 ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನ ಲಭಿಸಿದೆ.

ಸ್ವಂತ ಪಿಂಚಣಿ ಹಣದಲ್ಲೇ ಹಳ್ಳಿ ಹಳ್ಳಿಗಳಿಗೆ ಸಂಚಾರ
ತಮಗೆ ಸರ್ಕಾರದಿಂದ ಬರುವ ತಿಂಗಳಿಗೆ 40,000 ರೂ. ಪಿಂಚಣಿ ಹಣದಲ್ಲೇ ನಾರಾಯಣ ನಾಯ್ಕ್ ಅವರು ತಮ್ಮ ಸಮಾಜಮುಖಿ ಕೆಲಸವನ್ನಾ ಮುಂದುವರಿಸಿದ್ದಾರೆ. ಈ ಹಣದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಅವರು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಮತ್ತು ಪ್ರಯಾಣಕ್ಕಾಗಿ ಮೀಸಲಿಟ್ಟಿದ್ದಾರೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ತಮ್ಮ ಹಳೆಯ 'ಹೋಂಡಾ ಡ್ರೀಮ್' ಬೈಕ್ ಏರುವ ಇವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೂಲೆ ಮೂಲೆಯ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ.
ವಿದ್ಯಾರ್ಥಿಗಳನ್ನ ಮತ್ತು ಅವರ ಪೋಷಕರನ್ನ ಭೇಟಿಯಾಗಿ, ಸರ್ಕಾರಿ ಹಾಗೂ ಖಾಸಗಿ ಟ್ರಸ್ಟ್‌ಗಳಿಂದ ಲಭ್ಯವಿರುವ ವಿವಿಧ ವಿದ್ಯಾರ್ಥಿವೇತನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅರ್ಜಿಗಳನ್ನ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಸಲ್ಲಿಸಲು ಸ್ವತಃ ನೆರವಾಗುವುದಲ್ಲದೆ, ಸಂಬಂಧಪಟ್ಟ ಇಲಾಖೆಗಳಲ್ಲಿ ಆ ಅರ್ಜಿಗಳು ವಿಲೇವಾರಿಯಾಗುವವರೆಗೆ ಬೆನ್ನತ್ತಿ ನಿಲ್ಲುತ್ತಾರೆ.
1 ಲಕ್ಷ ವಿದ್ಯಾರ್ಥಿಗಳಿಗೆ 5 ಕೋಟಿ ರೂ. ನೆರವು
ನಾರಾಯಣ ನಾಯ್ಕ್ ಅವರ ಈ ಪ್ರಯತ್ನಕ್ಕೆ ಅನೇಕ ಸಂಸ್ಥೆಗಳು ಕೈಜೋಡಿಸಿವೆ. ವಿಶೇಷವಾಗಿ ಸುಪ್ರಜಿತ್ ಫೌಂಡೇಷನ್ ಮತ್ತು ದ್ಯುತಿ ಫೌಂಡೇಷನ್ ನಂತಹ ಸಂಸ್ಥೆಗಳು ಪ್ರತಿ ವರ್ಷ ಸುಮಾರು 16 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನ ಅರ್ಹ ವಿದ್ಯಾರ್ಥಿಗಳಿಗೆ ಒದಗಿಸುತ್ತಿವೆ.
ಕಳೆದ ಎರಡು ದಶಕಗಳಲ್ಲಿ ಇವರ ಮಾರ್ಗದರ್ಶನದಿಂದಾಗಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿದ್ಯಾರ್ಥಿವೇತನ ಪಡೆದು ತಮ್ಮ ಶೈಕ್ಷಣಿಕ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಇವರ ನೆರವಿನಿಂದ ಓದಿದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಇಂದು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಹುದ್ದೆಗಳಲ್ಲಿದ್ದಾರೆ.
ಬಾಲ್ಯದ ಕಷ್ಟಗಳೇ ನಿಸ್ವಾರ್ಥ ಸೇವೆಗೆ ಸ್ಫೂರ್ತಿ
ನಾರಾಯಣ ನಾಯ್ಕ್ ಅವರ ಈ ಸೇವೆಯ ಹಿಂದೆ ಅವರು ಬಾಲ್ಯದಲ್ಲಿ ಅನುಭವಿಸಿದ ನೋವಿನ ಕಥೆಯಿದೆ. ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಇವರು, ಶಾಲೆಗೆ ನಿತ್ಯ ಕಿಲೋಮೀಟರ್‌ಗಟ್ಟಲೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಮನೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟವಿದ್ದ ಕಾರಣ, 5ನೇ ತರಗತಿಯ ನಂತರ ಇವರ ಶಾಲೆ ಬಿಡಿಸಲು ತಂದೆ ನಿರ್ಧರಿಸಿದ್ದರು.ಆದರೆ ಓದಿನ ಮೇಲೆ ತೀವ್ರ ಹಸಿವಿದ್ದ ಬಾಲಕ ನಾರಾಯಣ, ಗಾಂಧೀಜಿಯವರ ತತ್ವದಿಂದ ಸ್ಫೂರ್ತಿ ಪಡೆದು ಮನೆಯಲ್ಲೇ ಉಪವಾಸ ಸತ್ಯಾಗ್ರಹ ನಡೆಸಿದರು. ಮಗನಲ್ಲಿದ್ದ ಛಲ ಕಂಡ ತಂದೆ ಮತ್ತೆ ಶಾಲೆಗೆ ಕಳುಹಿಸಿದರು. ಹಣಕಾಸಿನ ತೊಂದರೆಯಿಂದ ತಾನು ಅನುಭವಿಸಿದ ಕಷ್ಟ ಇನ್ನೊಂದು ಮಗುವಿಗೆ ಬರಬಾರದು ಎಂದು ನಿರ್ಧರಿಸಿ, ಇಂದು ಸಾವಿರಾರು ವಿದ್ಯಾರ್ಥಿಗಳ ಪಾಲಿನ ಬೆಳಕಾಗಿದ್ದಾರೆ.


Click it and Unblock the Notifications
