ನಂದಿನಿಉಳಿಸಿ; ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ ನಡೆದಿದೆ 3ನೇ ಸಂಚು: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು,ಏಪ್ರಿಲ್ 8: ವಿಧಾನಸಭಾ ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಹೊಸದೊಂದು ವಿವಾದ ತಲೆ ಎತ್ತಿದೆ. ಅಮುಲ್‌ಗೆ ಮಣೆ ಹಾಕಲು ಕೆಎಂಎಫ್ ವಿರುದ್ಧ ಕುತಂತ್ರ ನಡೆಸಿರುವ ಆರೋಪ ಕೇಳಿ ಬರ್ತಿದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಕನ್ನಡಿಗರ ಜೀವನಾಡಿ ನಂದಿನಿಯನ್ನ ಮುಗಿಸಲು ಸರ್ಕಾರ ಮೂರು ಸಂಚು ರೂಪಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಬಂದಂತಹ ಸಂದರ್ಭದಲ್ಲಿ ಅಮುಲ್ ಜತೆ ನಂದಿನಿ ವಿಲೀನ ಹೇಳಿಕೆ ಇದು ನಂದಿನಿ ಮುಗಿಸುವ ಮೊದಲ ಸಂಚು, ಮೊಸರಿನ ಮೇಲೆ ಹಿಂದಿಯ 'ದಹಿ' ಪದ ಮುದ್ರಣ ಇದು ಎರಡನೇ ಸಂಚು ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲವಾಗಿ . 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ ಎಂದು ನಂದಿನಿ ಉಳಿಸಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕನ್ನಡಿಗರಿಗೆ ಕರೆ ನೀಡಿದ್ದಾರೆ.
ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ʼನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ʼನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ. 3/10
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 8, 2023
ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ʼ ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್ʼಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ. ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ.

ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ʼನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ʼನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದು ಕಿಡಿಕಾರಿದ್ದಾರೆ.
ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿಯನ್ನು ತುಳಿಯುವ ಹುನ್ನಾರ ನಡೆಸುತ್ತಿದೆ, ಇದು ಸ್ಪಷ್ಟ. ಸಹಕಾರಿ ಕ್ಷೇತ್ರದ ಪ್ರಸಿದ್ಧ ಸೋದರ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಯಾರಿಗೂ ಹಿತವಲ್ಲ.ಕೆಎಂಎಫ್ ರಾಜ್ಯದ ಸಾವಿರಾರು ಗ್ರಾಮಗಳ ಸಹಕಾರ ಸಂಘಗಳ ಮೂಲಕ ರೈತರಿಂದಲೇ ಹಾಲನ್ನು ನೇರವಾಗಿ ಖರೀದಿಸುತ್ತದೆ.
ಬಿಜೆಪಿ ಡಬಲ್ ಎಂಜನ್ ಸರಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಇದುರೆಗೂ ಇಷ್ಟೆಲ್ಲಾ ಆದರೂ ರಾಜ್ಯ ಬಿಜೆಪಿ ಸರಕಾರದ ದಿವ್ಯಮೌನ, ಕೆಎಂಎಫ್ ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು ಮಾರಿದ್ದಿಲ್ಲ. ಅದು ಅಮುಲ್ ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ವವನ್ನು ಗೌರವಿಸಿದೆ. ಹಾಲು ಸಮೃದ್ಧಿ ಇರುವ ಯಾವುದೇ ಮಹಾಮಂಡಳದ ಸ್ಥಳೀಯ ವ್ಯಾಪ್ತಿಯಲ್ಲಿ ಕೆಎಂಎಫ್ ತನ್ನ ಹಾಲನ್ನು ಮಾರಲ್ಲ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ.
ಕನ್ನಡಿಗರಿಗೆ ಅಮುಲ್ ಋಣಿ ಇರಬೇಕು. ಎಚ್ ಡಿ ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ, ಎಚ್ ಡಿ ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಯಲಹಂಕ ಮದರ್ ಡೈರಿಯಲ್ಲಿ ವಿಶೇಷ ಐಸ್ ಕ್ರೀಮ್ ಘಟಕ ಸ್ಥಾಪಿಸಿ, ಈ ಘಟಕದಿಂದ ದಶಕಗಳಿಂದ ನಿತ್ಯವೂ ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಅಮುಲ್ ಬ್ರ್ಯಾಂಡ್ ಐಸ್ʼಕ್ರೀಮ್ ತಯಾರಿಸಿ ಈಗಲೂ ಕೊಡುತ್ತಿದೆ ಎಂದರು.
ಅಷ್ಟೇ ಅಲ್ಲ; ರಾಜ್ಯ ಸರಕಾರವು ಗುಜರಾತ್ ಹಾಲು ಮಹಾಮಂಡಳಿ ಅಮುಲ್ʼಗೆ ಬೆಂಗಳೂರಿನ ಕೋರಮಂಗಲದಲ್ಲಿ ಅತೀ ಕಡಿಮೆ ದರಕ್ಕೆ ಬೆಲೆ ಬಾಳುವ ಬೃಹತ್ ಜಾಗ ನೀಡಿದೆ. ಇಷ್ಟು ಔದಾರ್ಯ ತೋರಿದ ಕರ್ನಾಟಕ ಹಾಲು ಉತ್ಪಾದಕರು ಮತ್ತು ಕೆಎಂಎಫ್ʼಗೆ ದೊಡ್ಡ ಖೆಡ್ಡಾ ತೋಡಲು ಅಮುಲ್ ಹೊರಟಿದೆ. ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. ನಮ್ಮ ಜನತೆ -ಗ್ರಾಹಕರು ನಂದಿನಿ ಉತ್ಪನ್ನಗಳನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ ಬದುಕನ್ನು ಕಾಪಾಡಬೇಕು ಎಂದು ಹೇಳಿದ್ದಾರೆ.
ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.












Click it and Unblock the Notifications