ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಮಗ್ಗ ಕೊಲ್ಲದಿರಿ, ದೇಸಿ ಸಂಸ್ಕೃತಿ, ಪರಂಪರೆ ಉಳಿಸಿ

By Mahesh
|
Google Oneindia Kannada News

ಗದಗ. ನ.2: ಪ್ರಧಾನಿ ಮೋದಿ ಅವರು ಮೇಕ್ ಇನ್ ಇಂಡಿಯಾ ಅಭಿಯಾನ ಆರಂಭಿಸಿರಬಹುದು. ರಾಜ್ಯಕ್ಕೆ ಈ ಅಭಿಯಾನದ ಬಿಸಿ ಇನ್ನೂ ಮುಟ್ಟಿಲ್ಲ. ನಮ್ಮ ರಾಜ್ಯದಲ್ಲಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ಬೆಂಬಲಿಗರ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಮೌನ ಮೆರವಣಿಗೆ ಸದ್ದಿಲ್ಲದೇ ಆರಂಭವಾಗಿದೆ. ದೇಸಿ ಪಾರಂಪರಿಕ ನೇಕಾರಿಕೆ, ಕೃಷಿ ಮತ್ತು ನಮ್ಮ ಸಂಸ್ಕೃತಿ ಪ್ರತೀಕವಾದ ಕೈಮಗ್ಗಕ್ಕೆ ಈಗ ಕುತ್ತುಂಟಾಗಿದೆ. ಈ ಬಗ್ಗೆ ಯಾರೂ ಸೊಲ್ಲೆತ್ತುತ್ತಿಲ್ಲ.

ಕೈಮಗ್ಗ ಮೀಸಲಾತಿ ಅಧಿನಿಯಮ ಜಾರಿಗೊಳಿಸುವಂತೆ ದೇಸಿ, ಚರಕ ಸಂಸ್ಥೆಯ ಪ್ರಸನ್ನ ಅವರು ಆಗ್ರಹಿಸಿ ಉಪವಾಸ ನಿರಶನ ಹೂಡಿದ್ದಾರೆ. ಗ್ರಾಮೀಣ ಭಾಗಕ್ಕೆ ಬೇಕಾಗಿರುವುದು ವೈಚಾರಿಕಾ ಕ್ರಾಂತಿ, ಕೈಗಾರಿಕಾ ಕ್ರಾಂತಿಯಲ್ಲ, ಕೈಮಗ್ಗಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಕೈಮಗ್ಗ ಕೊಲ್ಲದಿರಿ ಎಂದು ದೇಸಿ ಟ್ರಸ್ಟ್ ಆಗ್ರಹಿಸಿದೆ.

ಕೈಮಗ್ಗ ಸತ್ಯಾಗ್ರಹಿಗಳಿಗೆ ವಿರೋಧವಾಗಿ ವಿದ್ಯುತ್ ಮಗ್ಗ ಬೆಂಬಲಿತರು ಇಲ್ಲಿನ ಗಜೇಂದ್ರಗಡದಲ್ಲಿ ಮೌನ ಮೆರವಣಿಗೆಯನ್ನು ನಡೆಸಿದ್ದಾರೆ. ಕೈಮಗ್ಗ ಸತ್ಯಾಗ್ರಹಿಗಳು ಕೈಮಗ್ಗ ಮೀಸಲಾತಿ ಅಧಿನಿಯಮ 1985ನ್ನು ಗಟ್ಟಿಯಾಗಿ ಜಾರಿಗೊಳಿಸಿ ಎಂದು ಆಗ್ರಹಿಸಿದ್ದಾರೆ. [ಮೇಕ್ ಇನ್ ಇಂಡಿಯಾ ಬಗ್ಗೆ ಮೋದಿ]

1985ರ ಕೈಮಗ್ಗ ಮೀಸಲಾತಿ ಅಧಿನಿಯಮದಂತೆ, ಕೈಮಗ್ಗಕ್ಕೆ ಕಾಯ್ದಿರಿಸಿದ ಪದಾರ್ಥಗಳನ್ನು ಹೊರತು ಪಡಿಸಿ, ಉಳಿದ ಪದಾರ್ಥಗಳನ್ನು ವಿದ್ಯುತ್ ಮಗ್ಗದವರು ಮಾಡಲಿ. ಆ ಮೂಲಕ ಅವರು ಬದುಕಿಕೊಳ್ಳಲಿ ಎಂಬುದು ಕೈಮಗ್ಗ ಸತ್ಯಾಗ್ರಹಿಗಳ ಆಶಯ.

ಸರಕಾರವೇ ಮಾಡಿರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಶಾಂತಿಯುತವಾಗಿ ಕೇಳುವುದು ತಪ್ಪೇ?? ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಶಾಂತಿಯಿಂದ ಆಗ್ರಹಿಸುವುದು ತಪ್ಪೇ???

ಸತ್ಯಾಗ್ರಹಿಗಳು ಆಗ್ರಹಿಸುತ್ತಿರುವುದು ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು, ದುಡಿಯುವ ಕೈಗಳನ್ನು ಕಡಿದು ಅವರನ್ನು ನಿರ್ಗತಿಕರನ್ನಾಗಿಸಿ ಎಂದಲ್ಲ! ಪಾರಂಪರಿಕವಾಗಿ ನಡೆಸಿಕೊಂಡು ಬಂದ ನೇಕಾರಿಕೆ ಹಾಗೂ ಅದರಲ್ಲಿರುವ ನೈಪುಣ್ಯತೆ / ಕರಕುಶಲತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ಗ್ರಾಮೀಣಾಭಿವೃದ್ಧಿಗೆ ಪಣತೊಡಬೇಕು ಇದು ಸತ್ಯಾಗ್ರಹಿಗಳ ಮೂಲ ಆಗ್ರಹವಾಗಿದೆ.

ಬನ್ನಿ....ನಮ್ಮ ಪಾರಂಪರಿಕ ನೇಕಾರಿಕೆ, ಕೃಷಿ ಮತ್ತು ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಿಕೊಳ್ಳ ಬೇಕಾಗಿದೆ. ಅದೂ ಉಪಪಾಸವೆಂಬ ಶಾಂತಿಯುತವಾದ ಅಸ್ತ್ರದಿಂದ. ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯ.... ಎಂದು ದೇಸಿ ಟ್ರಸ್ಟ್ ತನ್ನ ಫೇಸ್ ಬುಕ್ ಪುಟದ ಮೂಲಕ ಸಾರ್ವಜನಿಕರಲ್ಲಿ ಮನವಿಮಾಡಿಕೊಂಡಿದೆ.

ಕೈಮಗ್ಗ ನೇಕಾರರ ಬೇಡಿಕೆಗಳೇನು?:
* ಪಾರಂಪರಿಕ ಕೈಮಗ್ಗ ಕ್ಷೇತ್ರದಲ್ಲಿ ವಿದ್ಯುತ್ ಮಗ್ಗಅಳವಡಿಕೆ ನಿಲ್ಲಲಿ.
* ವಿದ್ಯುತ್ ಮಗ್ಗಗಳ ವಸ್ತ್ರವನ್ನು ನೇರವಾಗಿ ವಿದ್ಯುತ್ ನೇಕಾರರಿಂದಲೇ ಖರೀದಿಸಿ.
* ಕೈಮಗ್ಗ ಮೀಸಲಾತಿ ಅಧಿನಿಯಮ, 1985, ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ.
*ಕರ್ನಾಟಕದ ಸಾರ್ವಜನಿಕ ಉದ್ದಿಮೆಗಳು ಹಾಗೂ ಸರಕಾರಿ ಇಲಾಖೆಗಳ ಸಮವಸ್ತ್ರವು ಕರ್ನಾಟಕದ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಂದ ಮಾತ್ರವೇ ಸರಬರಾಜಾಗಲಿ.
* ವಿದ್ಯಾವಿಕಾಸ ಯೋಜನೆಯು ಕೈಮಗ್ಗ ಕ್ಷೇತ್ರಕ್ಕೆ ಮೀಸಲಿರಲಿ. ಕೈಮಗ್ಗಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಯ ಮಾರ್ಗೋಪಾಯಗಳನ್ನು ಸೂಚಿಸಬೇಕಿರುವ ಉನ್ನತ ಮಟ್ಟದ ಸಲಹಾ ಸಮಿತಿಯನ್ನು ತಕ್ಷಣ ನಿಯಮಿಸಿ.
* ತಡೆಹಿಡಿಯಲಾಗಿರುವ ನೇಕಾರರ ಪ್ಯಾಕೇಜಿನ ಸಮರ್ಥ ವಿತರಣೆ ಮಾಡಿ. ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳ ವಸ್ತ್ರ ಖರೀದಿಗೆ ಏಕಗವಾಕ್ಷ ಪದ್ದತಿ ಜಾರಿಗೆ ಬರಲಿ


ಪ್ರಸನ್ನ ಅವರ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಮಾತನಾಡಿ 'ನೇಕಾರಿಕೆ ಎನ್ನುವದು ಪರಂಪರೆಯ ಮುಂದುವರಿಕೆ. ಸಮಾಜದ ಎಲ್ಲ ವರ್ಗದ ಜನರೂ ಈ ಮುಂದುವರೆಕೆಯಲ್ಲಿ ಭಾಗಿಗಳಾಗಬೇಕು. ಅದರಲ್ಲೂ ಮುಖ್ಯವಾಗಿ ಸಂಸ್ಕ್ರತಿ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿರುವವರು ನೇಕಾರಿಕೆಯನ್ನು ಸಂಸ್ಸೃತಿಯ ಒಂದು ಅವಿಭಾಜ್ಯ ಅಂಗವೆಂದು ಪ್ರತಿಬಿಂಬಿಸಿ ಸಮಾಜದ ಎಲ್ಲರ ಗಮನಕ್ಕೆ ತರುವ ಅಗತ್ಯದೆ. ಕೈಮಗ್ಗದ ಬಟ್ಟೆಗಳನ್ನು ಧರಿಸುವವರು ಅದರ ಉತ್ಪಾದಕರ ಕಷ್ಟಸುಖಗಳ ಬಗೆಗೆ ಗಮನ ಹರಿಸಬೇಕಾದ ಅಗತ್ಯವಿದೆ. ಕಳೆದ ಸುಮಾರು ಒಂದು ವರ್ಷದಿಂದ ಕರ್ನಾಟಕದಲ್ಲಿ ನಡೆಸುತ್ತಿರುವ ಈ ಕೈಮಗ್ಗದ ಸತ್ಯಾಗ್ರಹದ ತಜ್ಞರು, ಪರಿಣಿತರು, ಸಮಾಜವಿಜ್ಞಾನಿಗಳು ಆಸಕ್ತಿವಹಿಸಬೇಕು ಎಂದರು.

ಆಂದ್ರಪ್ರದೇಶದ ಲತಾರೆಡ್ಡಿ, ಗೋಪಿಕೃಷ್ಣ, ಮುದೇನೂರ ಶಂಕ್ರಪ್ಪ, ದೆಹೆಲಿ ಪತ್ರಕರ್ತರಾದ ರವೀಂದ್ರ ತ್ರಿಪಾಠಿ, ಆರ್.ಕೆ.ಬಾಗವಾನ, ಬಸವರಾಜ ಕೆಂಚರಡ್ಡಿ, ಎಂ.ಎಸ್.ಹಡಪದ, ಬಾಲುರಾಠೋಡ, ಪಾಂಡುರಂಗ ಶಿಲವೇರಿ, ವಿಶ್ವನಾಥ ಕೆಂಚಿ, ಕುಲಕರ್ಣಿ, ದಾವಲ ವಣಗೇರಿ ಮುಂತಾದವರು ಪ್ರತಿಭಟನೆಗೆ ಬೆಂಬಲಿಸಿ ಉಪಸ್ಥಿತರಿದ್ದರು.

English summary
Artistes, activists and writers apart from members of the All-India Federation of Handloom Organisation (AIFHO) took part in the fast launched by Prasanna, theatre personality and convener of Desi, an organisation striving to promote handlooms, seeking action to save the handloom sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X