ಮೋದಿ, ನಡ್ಡಾ-ಪಡ್ಡಾ, ಅಮಿತ್ ಶಾ ನಿಂತರೂ ಭದ್ರಾವತಿ ಜನ ವೋಟ್ ಹಾಕಲ್ಲ: ಸಂಗಮೇಶ್ವರ್
ಶಿವಮೊಗ್ಗ,ಮೇ1: ನರೇಂದ್ರ ಮೋದಿ ಬಂದು ನಿಂತರೂ ಭದ್ರಾವತಿಯಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ನಮ್ಮ ಜನ ಸೋಲಿಸಿಬಿಡ್ತಾರೆ. ಅಮಿತ್ ಶಾ ಬಂದರೂ ಸೋಲಿಸ್ತೀವಿ ಅವರ ರಾಷ್ಟ್ರೀಯ ಅಧ್ಯಕ್ಷ ನಡ್ಡಾ- ಪಡ್ಡಾ ಬಂದರೂ ಬಿಜೆಪಿ ಗೆಲ್ಲೋದಿಲ್ಲ ಎಂದು ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್ ಹೇಳಿದ್ದಾರೆ.
ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ವೇಳೆ ಮಾತನಾಡಿದ ಅವರು, ಭದ್ರಾವತಿಯ ತಮ್ಮ ಕೋಟೆಯನ್ನ ಯಾರೂ ಭೇದಿಸಲು ಸಾಧ್ಯವಿಲ್ಲ. ಇಲ್ಲಿ ಅಮಿತ್ ಶಾ, ನಡ್ಡಾ- ಪಡ್ಡಾ ಯಾರು ಬಂದು ಪ್ರಚಾರ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲ್ಲಲ್ಲು ಸಾಧ್ಯವಿಲ್ಲ, ಸೋಲಿಸುತ್ತೇವೆ ಎಂದು ಹೇಳಿದರು.

ಇಲ್ಲಿಯರೆಗೂ ಭದ್ರಾವತಿಯಲ್ಲಿ ಬಿಜೆಪಿ ಈ ತನಕ ಠೇವಣಿ ಹಣವನ್ನೂ ಪಡೆದುಕೊಂಡಿಲ್ಲ. ಗೆಲ್ತೀವಿ, ಗೆಲ್ತೀವಿ ಅಂತ ಅವರು ಹೇಳ್ತಾನೆ ಇರಬೇಕು ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಇಲ್ಲಿ ಗೆಲ್ಲೋದಿಲ್ಲ. ಭದ್ರಾವತಿ ಜನತೆ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗೆ ಮತ ಹಾಕಲ್ಲ. ಭದ್ರಾವತಿ ಪ್ರತಿಷ್ಠಿತ ಕಣ ಅಂತ ಎಲ್ಲಾ ಸಮಯದಲ್ಲೂ ಹೇಳ್ತಾನೇ ಇರ್ತಾರೆ. ಪ್ರತಿಷ್ಠಿತನೂ ಅಲ್ಲ, ಯಾವ ಘಟಾನುಘಟಿಯೂ ನನ್ನ ಮುಂದೆ ಇಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಭದ್ರಾವತಿಯಲ್ಲಿ ಬಿಜೆಪಿ ಗೆಲ್ಲೋದಿಲ್ಲ ಕಾರಣ, ಬಿಜೆಪಿ ಕೋಮುವಾದಿ ಪಕ್ಷ ಅಂತ ಭದ್ರಾವತಿ ಜನರಿಗೆ ಗೊತ್ತು. ಹೀಗಾಗಿ ಬಿಜೆಪಿಗೆ ಮತ ಹಾಕಲ್ಲ. ಇಲ್ಲಿ ಯಾರೇ ಬಂದು ಸ್ಪರ್ಧೆ ಮಾಡಿದರು ನಮ್ಮ ಜನ ಅವರಿಗೆ ಮತ ಹಾಕಲ್ಲ ಎಂದು ಎಂದು ಸಂಗಮೇಶ್ವರ್ ಹೇಳಿದರು.
ನಾವು ಕ್ಷೇತ್ರದ ಜನತೆಯ ಕಷ್ಟಕ್ಕೆ ಸ್ಪಂದಿಸಿದ್ದೇವೆ. ನಮ್ಮ ಕಷ್ಟಕ್ಕೆ ಅವರು ಅವರ ಕಷ್ಟಕ್ಕೆ ನಾವು ಯಾವಾಗಲೂ ನಿರಂತರವಾಗಿ ನಮ್ಮ ಬಾಂಧವ್ಯ ಸಾಗಿದೆ. ಈ ಬಾರಿ ಮತ್ತೆ ಭದ್ರಾವತಿ ಜನ ಪುನಃ ನನ್ನ ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಡಸಿದ ಅವರು, ಚುನಾವಣಾ ಸಂದರ್ಭದಲ್ಲಿ ಮಾತ್ರ ನಾವು ಬರೋದಿಲ್ಲ. ನಾವೇ ಗೆಲ್ಲುತ್ತೇವೆ ನಮ್ಮ ಕಾಂಗ್ರೆಸ್ ಭರವಸೆ ವರದಾನವಾಗಲಿದೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ಪರ ಜನರಿದ್ದಾರೆ. ರಾಜ್ಯದ ಆರುವರೆ ಕೋಟಿ ಜನರು ಕೂಡ ಕಾಂಗ್ರೆಸ್ ಪರ ಇದ್ದಾರೆ. ಭದ್ರಾವತಿ ಜನರು ಕೂಡ ನನ್ನನ್ನ ಮನೆ ಮಗ ಎಂದುಕೊಂಡು ಆಶೀರ್ವದಿಸುತ್ತಾರೆ. ನಾನು ಈ ಬಾರಿ 50,000 ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಒಂದೇ ತಾಯಿ ಮಕ್ಕಳು ಎಂದು ತಿಳಿದುಕೊಂಡಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭದ್ರಾವತಿ ಕ್ಷೇತ್ರಕ್ಕೆ ಮೇ ನಾಲ್ಕನೇ ತಾರೀಖಿನಂದು ಬರಬಹುದು, ಭದ್ರಾವತಿ ವಿಧಾನಸಭಾ ಕ್ಷೇತ್ರ ನನಗೇನು ಹೊಸದಲ್ಲ. ಐದು ವರ್ಷದಿಂದಲೂ ನನ್ನ ಪ್ರಚಾರ ನಿರಂತರವಾಗಿ ಸಾಗಿದೆ ಎಂದರು.












Click it and Unblock the Notifications